ಡಂಬಳ: ರಾಜ್ಯ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಮಾದಿಗ ಸಮಾಜದವರು ತಪ್ಪದೇ ಕಡ್ಡಾಯವಾಗಿ ಹೆಮ್ಮೆಯಿಂದ ಮಾದಿಗ ಎಂದು ಬರೆಸುವ ಮೂಲಕ ಜಾತಿ ಸಮೀಕ್ಷೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ತಾಲೂಕಿನ ಆಯಾ ಗ್ರಾಮದಲ್ಲಿ ನಮ್ಮ ಸಮುದಾಯದ ವಿದ್ಯಾವಂತರು ಹಾಗೂ ದಲಿತ ಸಂಘಟನೆಗಳು, ಮುಖಂಡರು, ಯುವಕರು ಗಣತಿಗೆ ಬರುವ ಶಿಕ್ಷಕರಿಗೆ ನಮ್ಮ ಸಮುದಾಯದ ಪ್ರತಿಯೊಂದು ಕುಟುಂಬದ ಸಮಗ್ರ ಮಾಹಿತಿ ನೀಡುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಂಡರಗಿ ಎಸ್.ಸಿ. ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಯಪ್ಪ ಕೆ. ಸಿದ್ದಣ್ಣವರ ಅಭಿಪ್ರಾಯಪಟ್ಟಿದ್ದಾರೆ.
ಮೇ 5ರಿಂದ 17ರವರೆಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಯುತ್ತಿದೆ. ಪರಿಶಿಷ್ಟ ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸ್ಥಿತಿಗಳ ವಾಸ್ತವಾಂಶವನ್ನು ಅರಿಯಲು ಸಾಧ್ಯವಾಗುತ್ತದೆ. ಸಮೀಕ್ಷೆಯಲ್ಲಿ ಮಾದಿಗರು ಒಗ್ಗಟ್ಟು ತೋರಿಸಬೇಕಿದೆ. ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆದಿದೆ. ಸದಾಶಿವ ಆಯೋಗ ಕೂಡ ಸಮೀಕ್ಷೆ ಹಾಗೂ ಅಭಿವೃದ್ಧಿಗೆ ಸೂಚಿಸಿತ್ತು. ಪರಿಶಿಷ್ಠ ಜಾತಿಗಳಿಗೆ ಒಳಮೀಸಲಾತಿ ನೀಡಲು ಈಚೆಗೆ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಹಮ್ಮಿಕೊಂಡಿರುವ ಸಮಗ್ರ ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರು ಗಣತಿಗೆ ಮನೆಗೆ ಬಂದಾಗ ನಿಖರವಾಗಿ ನಮ್ಮ ಜಾತಿ ಮಾದಿಗ ಎಂದು ನೋಂದಾಯಿಸಿಕೊಂಡಾಗ ಮಾತ್ರ ಸರ್ಕಾರದ ಒಳಮೀಸಲಾತಿ ಅರ್ಹತೆ ಸಿಗಲಿದೆ. ಈ ಕುರಿತು ಪ್ರತಿಯೊಬ್ಬರು ನಮ್ಮ ಸಮುದಾಯದ ಜನ ಜಾಗೃತೆ ಹೊಂದಬೇಕು ಎಂದು ತಿಳಿಸಿದ್ದಾರೆ.