ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು 69ನೇ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಧರೆಗೆ ದೊಡ್ಡವರು ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಪಂಚಭೂತಗಳನ್ನು ಕಲುಷಿತ ಮಾಡುತ್ತಿದ್ದೇವೆ. ಇತ್ತೀಚಿನ ದಶಕಗಳಲ್ಲಿ ನಿಸರ್ಗದಿಂದ ಮಾನವ ಸಂಕುಲ ದೂರ ಹೋಗುತ್ತಿದೆ. ದೂರ ಹೋದಷ್ಟು ಭೂಮಿಗೆ ಕೋಪ ಬರುತ್ತಿದೆ. ಅದು ಹವಾಮಾನ ವೈಪರೀತ್ಯದ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಭೂಮಿಗೆ ಆಸೆ ಪೂರೈಸುವ ಶಕ್ತಿ ಇದೆಯೇ ಹೊರತು ದುರಾಸೆಗಳನ್ನು ಅಲ್ಲ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.
ಎಂದೂ ತ್ಯಾಜ್ಯ ಸುಡಬೇಡಿ:ವಿಪರೀತ ಜಾಹೀರಾತಿನ ಮೊರೆ ಹೋಗಿ ಕೀಳರಿಮೆ ಬೆಳೆಸಿಕೊಂಡ ಸಮಾಜ, ವಸ್ತುಗಳ ಖರೀದಿಗೆ ಮುಂದಾಗಿದೆ. ಪ್ರತಿ ಊರ ಹೊರಗಿನ ಪ್ರದೇಶದಲ್ಲಿ ತ್ಯಾಜ್ಯದ ಗುಡ್ಡ ದೊಡ್ಡದಾಗುತ್ತಿದೆ. ನಿತ್ಯ ಸುಡುವ ತ್ಯಾಜ್ಯದ ಹೊಗೆಯಲ್ಲಿ 16 ಬಗೆಯ ಕಾಯಿಲೆಗಳನ್ನು ಹಬ್ಬಿಸುವ ವಿಷ ಹೊರ ಸೂಸುತ್ತಿದೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಮಧುಮೇಹಿ ರೋಗಿಗಳನ್ನು ಹೊಂದಿರುವ, ಹೆಚ್ಚು ಹೃದ್ರೋಗ, ಕಿಡ್ನಿ ವೈಫಲ್ಯ ಹೊಂದಿರುವ ದೇಶ ಭಾರತ ಆಗುತ್ತಿರುವುದೇ ಇದೇ ಕಾರಣಕ್ಕೆ ಎಂದು ಹೇಳಿದರು.
ಜಗತ್ತಿನ 180 ದೇಶಗಳಲ್ಲಿ ಪರಿಸರದ ಕಾಳಜಿ ಇರುವ ರ್‍ಯಾಕಿಂಗ್‌ನಲ್ಲಿ ಭಾರತವು 176ರಲ್ಲಿದೆ. ಆದರೂ ಕೂಡಾ ದೇಶದಲ್ಲಿ ಎಲ್ಲೂ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳು ನಡೆಯುತ್ತಿಲ್ಲ. ಕಸ ಉರಿಯುತ್ತಿದ್ದರೂ ವಿದ್ಯಾವಂತರು ಸಹ ಅದನ್ನು ನೋಡಿಕೊಂಡು, ವಾಸನೆ ಹೀರುತ್ತಾ ಹೋಗುತ್ತಾರೆ. ಇದು ಈ ಸಮಾಜದ ಪ್ರತೀಕ. ಇದಕ್ಕಾಗಿಯೇ ದೆಹಲಿಯಲ್ಲಿ ಕಂಡು ಕೇಳರಿಯದಷ್ಟು ವಿಷಗಾಳಿ, ಮಂಜು ಸೇರಿದೆ. ಬೇಸಿಗೆಯಲ್ಲಿ 50 ಡಿಗ್ರಿಗೆ ತಾಪಮಾನ ಏರುತ್ತದೆ. ಗುಡ್ಡಗಳ ನಾಡಿನಲ್ಲಿ ಭೂಕುಸಿತ, ಹಿಮಭರತ ನಾಡಿನಲ್ಲಿ ಬೆಂಕಿ, ಮರಳುಗಾಡಿನಲ್ಲಿ ಮಳೆ ಆಗುತ್ತಿದೆ ಎಂದು ಹೇಳಿದರು.
ಡಾ. ನಾಗೇಶ ಹೆಗಡೆ ಅವರ ಬದುಕು ಮತ್ತು ಕೊಡುಗೆ ಕುರಿತು ಡಾ. ಶ್ರೀಧರ ಹೆಗಡೆ ಭದ್ರನ್ ಹಾಗೂ ಜಿ.ಎನ್. ಮೋಹನ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸಂಜೀವ ಕುಲಕರ್ಣಿ ಸಂಯೋಜನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು. ಡಾ. ನಾಗೇಶ ಹೆಗಡೆ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.