ಬೈಲಹೊಂಗಲ: ಕಾರೊಂದು ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ 41 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿ, 24 ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಳಿ ಸಂಭವಿಸಿದೆ.
ಕೆಂಗಾನೂರು ಗ್ರಾಮದ ಚಂದ್ರಪ್ಪ ಹಿತ್ತಲಮನಿ, ಈರಪ್ಪ ಕುರಿ ಹಾಗೂ ಹನುಮಂತಪ್ಪ ವಗ್ಗನ್ನವರ ಎಂಬುವರಿಗೆ ಸೇರಿದ ಸುಮಾರು 450 ಕುರಿಗಳ ಹಿಂಡು ಬೆಳವಡಿ ಕಡೆಗೆ ತೆರಳುತ್ತಿದ್ದವು. ಈ ವೇಳೆ ಜಾಲಿಕೊಪ್ಪ ಗ್ರಾಮದ ಬಳಿ ಹಿಂದಿನಿಂದ ಬಂದ ಕಾರು ನಿಯಂತ್ರಣ ತಪ್ಪಿ ಕುರಿಗಳ ಹಿಂಡಿನೊಳಗೆ ನುಗ್ಗಿದೆ ಎಂದು ತಿಳಿದುಬಂದಿದೆ.ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ರಸ್ತೆಯುದ್ದಕ್ಕೂ ಕುರಿಗಳ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳೀಯರು ಹಾಗೂ ಕುರಿಗಾರರು ಕೂಡಲೇ ರಕ್ಷಣಾ ಕಾರ್ಯ ಕೈಗೊಂಡಿದ್ದು, ಗಾಯಾಳು ಕುರಿಗಳನ್ನು ರಕ್ಷಿಸಿದ್ದಾರೆ. ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಕುರಿಗಳ ಮೌಲ್ಯ ಸೇರಿದಂತೆ ಕುರಿಗಾರರಿಗೆ ಸುಮಾರು ₹18 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಾಲೀಕರ ಆಕ್ರಂದನ: ಕಣ್ಣೆದುರೇ ಜೀವನಾಧಾರವಾಗಿದ್ದ ಕುರಿಗಳು ಸಾವನ್ನಪ್ಪಿರುವುದನ್ನು ಕಂಡ ಕುರಿಗಾರರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಲವರು ಮೃತ ಕುರಿಗಳನ್ನು ಅಪ್ಪಿಕೊಂಡು ಕಣ್ಣೀರಿಟ್ಟ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕುರಿಗಾರರು ಆಗ್ರಹಿಸಿದ್ದಾರೆ