ಗದಗ: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ತೀವ್ರ ಅನ್ಯಾಯ ಮಾಡುತ್ತಿದೆ, ಬಡವರಿಗೆ ತೊಂದರೆ ಕೊಡುತ್ತಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಕಳೆದ 3 ವರ್ಷಗಳಿಂದ ಈ ಯೋಜನೆಯ ಹಣ ಅನರ್ಹರಿಗೆ ಹೋಗಿದೆ ಎನ್ನುವುದಾದರೆ ಇದಕ್ಕೆ ಹೊಣೆ ಯಾರು? ರಾಜ್ಯದ ಬೊಕ್ಕಸವನ್ನು ಹಾಳು ಮಾಡಿರುವವರು ಈಗ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿರುವ ₹5 ಸಾವಿರ ಕೋಟಿ ಕುರಿತು ಸರ್ಕಾರ ಇದುವರೆಗೂ ಸ್ಪಷ್ಟ ಲೆಕ್ಕ ನೀಡಿಲ್ಲ, ವಿಧಾನಸಭೆಯಲ್ಲಿಯೇ ಈ ಪ್ರಶ್ನೆಯನ್ನು ನಮ್ಮ ಶಾಸಕರು ಕೇಳಿದರೂ ಇದುವರೆಗೂ ಸರ್ಕಾರ ಉತ್ತರಿಸುವ ಧೈರ್ಯ ತೋರಿಸಿಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ನೂರಾರು ಸಿಬ್ಬಂದಿಯನ್ನು ಕಡಿತಗೊಳಿಸಿರುವುದು ಯಾಕೆ? ಅವರಿಗೆ ಅಲ್ಲಿ ಕೆಲಸವಿಲ್ಲ ಎನ್ನುವುದಾದರೆ ಇಷ್ಟೊಂದು ದಿನಗಳ ಕಾಲ ಆ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದರು. ಇದು ಸಾರ್ವಜನಿಕರ ಜನರ ತೆರಿಗೆ ಹಣ ಲೂಟಿ ಅಲ್ಲದೇ ಮತ್ತೇನು? ಕಳೆದ 3 ವರ್ಷದಲ್ಲಿ ಏನೂ ಮಾಡದ ಸರ್ಕಾರ ಈಗ ಏನು ಮಾಡಲು ಸಾಧ್ಯ ಎಂದು ಲೇವಡಿ ಮಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಿ ಹೋಗಿದೆ? ಈ ಬಗ್ಗೆ ಸರ್ಕಾರ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆಯ ಈ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದಕ್ಕೆ ಅತೀವ ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಹಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕೆಲವರು ಖಾತೆಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಒಬ್ಬ ಸಚಿವರು ನೀರಾವರಿ ಖಾತೆ ಬೇಡ ಎನ್ನುತ್ತಾರೆ, ಮತ್ತೊಬ್ಬರು ಬೇರೆ ಖಾತೆಗಳನ್ನು ನಿರಾಕರಿಸುತ್ತಾರೆ. ಈಗಿನ ಪರಿಸ್ಥಿತಿ ಹೀಗಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿತಿ ಏನಾಗಲಿದೆ ಎಂಬುದೇ ಪ್ರಶ್ನೆಯಾಗಿದೆ ಎಂದರು.
ಆರ್‌ಎಸ್‌ಎಸ್ ಕುರಿತು ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ಪತ್ರದ ಕುರಿತು ಮಾತನಾಡಿದ ಅವರು ಆರ್ ಎಸ್ ಎಸ್ ಇವರಂಥ ನೂರಾರು ಗೃಹ ಮಂತ್ರಿಗಳನ್ನು ನೋಡಿದೆ. ಇವರ ಪಕ್ಷದ ಪರಮೋಚ್ಚ ನಾಯಕ ನೆಹರು ಅವರೇ ಹತ್ತಾರು ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದನ್ನು ಪ್ರಿಯಾಂಕ ಖರ್ಗೆ ತಿಳಿದುಕೊಂಡಿಲ್ಲ. ಗೃಹ ಮಂತ್ರಿಯಾಗಿ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳಾದ ಓಸಿ, ಮಟ್ಕಾ ಹಾಗೂ ಡ್ರಗ್ಸ್ ಮಾರಾಟ ಹೆಚ್ಚುತ್ತಿವೆ. ಅದರ ಬಗ್ಗೆ ಕಾಳಜಿ ವಹಿಸಿ, ಬೆಂಗಳೂರಿನಲ್ಲಿ ಮದ್ಯರಾತ್ರಿ ವರೆಗೂ ಬಾರ್‌ಗಳು ಪಬ್‌ಗಳು ಪ್ರಾರಂಭವಿರುತ್ತವೆ. ಅದರ ಬಗ್ಗೆಯೂ ಕಾಳಜಿ ವಹಿಸಲಿ ಎಂದರು.