ಕನ್ನಡಪ್ರಭ ವಾರ್ತೆ ಕೋಲಾರಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೆಚ್ಚಿನ ಮುತುವರ್ಜಿ ವಹಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು, ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಾಗಿ ನಡೆದ ಬಾಲ್ಯವಿವಾಹ ನಿಷೇಧ ಕಾಯಿದೆ-೨೦೦೬ ಹಾಗೂ ಪೋಕ್ಸೋ ಕಾಯ್ದೆ-೨೦೧೨ರ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಸಂರಕ್ಷಣಾ ಕಾನೂನುಗಳ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ರಕ್ಷಣಾ ಕಾನೂನು
ಮಕ್ಕಳನ್ನು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದರೂ ತಪ್ಪು ಮಾಡುತ್ತಿದ್ದಾರೆ, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ ೧೦೯೮ ಹಾಗೂ ೧೧೨ ಸಹಾಯವಾಣಿಯ ಉಪಯೋಗ ಪಡೆಯುವಂತಾಗಬೇಕು ಈ ಕುರಿತು ಅರಿವು ಅಗತ್ಯ ಎಂದ ಅವರು, ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ದವೂ ಅರಿವು ನೀಡಿ ಎಂದು ಸಲಹೆ ನೀಡಿದರು.ಪುಸ್ತಕ ರೂಪದಲ್ಲಿರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಪೊಲೀಸ್ ಸಿಬ್ಬಂದಿ ಕೆಲಸ ಮಾಡಬೇಕು, ಶಾಲೆಗಳಲ್ಲಿ ಮಕ್ಕಳಿಗೆ ಅರಿವು ನೀಡುವ ಕೆಲಸವಾಗಬೇಕು ಎಂದು ತಿಳಿಸಿ, ಲಿಂಗ ಪತ್ತೆ ನಿಷೇಧ ಕಾಯಿದೆ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ತಂಬಾಕು ಉತ್ಪನ್ನಗಳ ಕಾನೂನುಗಳ ಕುರಿತು ಮಾಹಿತಿ ನೀಡಿ, ೧೫೧೦೦ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಬಳಕೆಗೆ ಸೂಚಿಸಿದರು.ಬಾಲ್ಯವಿವಾಹ ತಡೆಗಟ್ಟಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿನದ್ದಾಗಿದೆ, ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಖುಷಿ ಕುಶಾಲಪ್ಪ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಜೆ.ಸತೀಶ್ ಬಾಲ್ಯವಿವಾಹ ಕಾಯಿದೆ ಕುರಿತು ಅರಿವು ಮೂಡಿಸಿದರು.ಮಾನಸಿಕ ರೋಗಿಗಳಿಗೆ ರಕ್ಷಣೆಕಾರ್ಯಾಗಾರದಲ್ಲಿ ಜಿಲ್ಲಾಸ್ಪತ್ರೆಯ ಮನೋವೈದ್ಯರಾದ ಡಾ.ವಿಜೇತಾದಾಸ್, ಮಾನಸಿಕ ಆರೋಗ್ಯ ರಕ್ಷಣೆ, ಮಾನಸಿಕ ರೋಗಿಗಳಿಗೆ ಇರುವ ಕಾನೂನುಗಳು, ಅವರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಅವರೊಂದಿಗೆ ನಮ್ಮ ವರ್ತನೆ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ ಇದ್ದರು.