ಭೀಮಣ್ಣ ಗಜಾಪುರ ಕೂಡ್ಲಿಗಿ
ಗುನ್ನಳ್ಳಿ ರಾಘವೇಂದ್ರ ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿರುವ ತಮ್ಮ ಮನೆಯಲ್ಲಿ 4 ವರ್ಷಗಳಿಂದ ಬೆಕ್ಕುಗಳನ್ನು ಸಾಕಲು ಶುರು ಮಾಡಿದ್ದು, ಇದೀಗ 25 ಆಗಿವೆ. ವಿವಿಧ ಬಣ್ಣದ ಬೆಕ್ಕುಗಳು ಇಡೀ ಮನೆಯ ತುಂಬಾ ಎಲ್ಲೆಂದರಲ್ಲೇ ರಾಜರೋಷವಾಗಿ ತಿರುಗಾಡುತ್ತವೆ. ಇದು ಬೆಕ್ಕುಗಳದ್ದೇ ಮನೆ, ಬೆಕ್ಕುಗಳ ಮನೆಯಲ್ಲೇ ಈ ಕುಟುಂಬ ವಾಸಿಸುತ್ತದೆಯೋ ಏನೋ ಎನ್ನುವ ಭಾವ ಮೂಡುತ್ತದೆ.
ಈ ಮನೆಯಲ್ಲಿ ರಾಷ್ಟ್ರೀಯ ನಾಯಕರು, ದೇವರ ಪೋಟೋಗಳ ಸಾಲಿಗೆ ಮರೆಯಾದ ಬೆಕ್ಕುಗಳ ಪೋಟೋ ಸಹ ಸ್ಥಾನ ಪಡೆದಿವೆ. ಮನಸ್ಸು ಶುದ್ಧವಾಗಿದ್ದರೆ ಯಾವುದು ಅಪಶಕುನವಲ್ಲ ಎಂದು ಈ ಕುಟುಂಬ ತೋರಿಸಿಕೊಟ್ಟಿದೆ. ರಾತ್ರಿ ಮಲಗಿದರೆ ಕಾಲಲ್ಲಿ, ಎದೆಯಲ್ಲಿ, ತಲೆದಿಂಬಿನಲ್ಲಿ ಬೆನ್ನಿನ ಮೇಲೆ ಮಲಗುತ್ತವೆ, ಗುನ್ನಳ್ಳಿ ರಾಘವೇಂದ್ರ ಮನೆಯಲ್ಲಿ ಇಲ್ಲದಿದ್ದರೆ ಅವರ ಪತ್ನಿ ಪೆನ್ನಮ್ಮ ಬೆಕ್ಕುಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ.ಶೌಚಾಲಯ ಬಳಸುವ ಬೆಕ್ಕುಗಳು: ರಾಣಿ, ಚಿನ್ನಿ, ಗುಂಡ, ಬಿಳಿ, ಖಡಿ, ಪಿಂಕಿ, ಅಪ್ಪಿ, ಬಡಕಿ, ಪಪ್ಪಿ, ಪ್ರೆಂಡ್, ತಿಪ್ಪಿಬಡಕಿ, ಪಾಪು ಹೀಗೆ ಹತ್ತಾರು ಹೆಸರುಗಳಿಂದ ಈ ಕುಟುಂಬದವರು ಕರೆಯುತ್ತಾರೆ. ಬೆಕ್ಕುಗಳ ಹೆಸರಿನಿಂದ ಕರೆದರೆ ಆ ಬೆಕ್ಕುಗಳು ಅಲರ್ಟ್ ಆಗುತ್ತವೆ. ಈ ಬೆಕ್ಕುಗಳು ಎಲ್ಲೆಂದರಲ್ಲಿ ಬಹಿರ್ದೆಸೆ ಮಾಡುವುದಿಲ್ಲ, ಬದಲಿಗೆ ಈ ಕುಟುಂಬದವರು ಬಳಸುವ ಶೌಚಾಲಯವನ್ನೇ ಬಳಸುವುದು ಕುತೂಹಲದ ಸಂಗತಿ.
ನಾಲ್ಕು ವರ್ಷಗಳಿಂದ ನನ್ನ ಮನೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೆಕ್ಕು ಸಾಕುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಷ್ಟೊಂದು ಬೆಕ್ಕುಗಳಿದ್ದರೂ ಸ್ವಚ್ಛವಾಗಿದೆ. ಪ್ರತಿದಿನ ಹಾಲು- ಅನ್ನ ಹಾಕಿ ಇಟ್ಟರೆ ತಿನ್ನುತ್ತವೆ. ಬೆಕ್ಕುಗಳು ಇಲ್ಲಿ ಜಗಳವಾಡುವುದಿಲ್ಲ, ಕೆಲವೊಮ್ಮೆ ಮುನಿಸಿಕೊಳ್ಳುತ್ತವೆ ಎಂದು ಕೂಡ್ಲಿಗಿ ಸಿಪಿಐಎಂ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ತಿಳಿಸಿದ್ದಾರೆ.