ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಆಶಾಕಿರಣ ಬಿಂಬಿಸಿದ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ನೌಕರರ ಸಂಘದ ಶಿಬಿರವು ವಿದ್ಯಾರ್ಥಿಗಳಲ್ಲಿ ಭರವಸೆಯ ಬೆಳಕನ್ನು ನೀಡಿದೆ.

ಹೊನ್ನಾವರ: ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಚೈತನ್ಯ ಹೊರಹೊಮ್ಮುತ್ತದೆ. ಶಿಕ್ಷಣವೇ ಸಮಾಜದ ಪ್ರಗತಿಯ ಸೋಪಾನ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಶಾಂತ್ ನಾಯ್ಕ ನುಡಿದರು.

ತಾಲೂಕಿನ ಮಂಕಿ ಕೊಕ್ಕೇಶ್ವರದ ರಾಮಕ್ಷತ್ರೀಯ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಆಶಾ ಕಿರಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಆಶಾಕಿರಣ ಬಿಂಬಿಸಿದ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ನೌಕರರ ಸಂಘದ ಶಿಬಿರವು ವಿದ್ಯಾರ್ಥಿಗಳಲ್ಲಿ ಭರವಸೆಯ ಬೆಳಕನ್ನು ನೀಡಿದೆ ಎಂದರು.

ಮಂಕಿ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಎಚ್‌.ಆರ್. ನಾಯ್ಕ ಮಾತನಾಡಿ, ಶಿಬಿರವು ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದು, ಶಿಬಿರದ ಉದ್ದೇಶಕ್ಕೆ ಧನಾತ್ಮಕವಾಗಿ ಸ್ಪಂದಿಸಿ ಎಂದರು.

ಕೊಕ್ಕೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಎಚ್. ನಾಯ್ಕ, ಶರಾವತಿ ಬ್ಯಾಂಕಿನ ಉಪಾಧ್ಯಕ್ಷ ಸುಧಾಕರ ನಾಯ್ಕ, ಕ್ಷತ್ರೀಯ ‌‌ಸೇವಾ ಟ್ರಸ್ಟಿನ ಮಾಜಿ ಅಧ್ಯಕ್ಷ ಪ್ರೇಮಕಾಂತ ಎಸ್. ನಾಯ್ಕ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಂಪನ್ಮೂಲ ವ್ಯಕ್ತಿ ಪ್ರದೀಪ್ ಸಾಮಗ ಉಡುಪಿ, ರಾಘವೇಂದ್ರ ನಾಯ್ಕ ಕೋಟೆಭೈಲ್ ಉದಯ ನಾಯ್ಕ ಮಂಕಿ ಮಡಿ, ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಖಜಾಂಚಿ ಜಗದೀಶ್ ನಾಯ್ಕ, ಆನಂದ ನಾಯ್ಕ ದೊಡ್ಡಗುಂದ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರೇಶ್ ನಾಯ್ಕ ಮಾತನಾಡಿದರು. ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಗಜಾನನ ನಾಯ್ಕ ಬಣಸಾಲೆ ನಿರೂಪಿಸಿದರು. ರವಿ ನಾಯ್ಕ ಹಾಗೂ ಉಮೇಶ್ ನಾಯ್ಕ ವಂದಿಸಿದರು. ಉದ್ಘಾಟನೆಯ ನಂತರ ಡಾ. ಪ್ರದೀಪ್ ಸಾಮಗ ಹಾಗೂ ರಾಘವೇಂದ್ರ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.