ಮಹಾರಾಜ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್

KannadaprabhaNewsNetwork |  
Published : Sep 15, 2025, 01:00 AM IST
39 | Kannada Prabha

ಸಾರಾಂಶ

ನಾಳೆಯ ತಂತ್ರಜ್ಞಾನ ಇಂದು ವಿನ್ಯಾಸಗೊಳ್ಳುತ್ತಿದೆ. ಈ ಕಾರ್ಯಕ್ರಮದಿಂದ ಮುಂದಿನ ಮಹತ್ವದ ಆವಿಷ್ಕಾರ ಹುಟ್ಟಬಹುದು

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಂಡವಪುರದ ಮಹಾರಾಜ ತಾಂತ್ರಿಕ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ದೇಶದ ತಾಂತ್ರಿಕ ಅಭಿವೃದ್ಧಿಗೆ ಪೂರಕವಾಗಿ ತಂತ್ರಜ್ಞಾನದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸುತ್ತ ಬಂದಿದೆ.

ಈ ನಿಟ್ಟಿನಲ್ಲಿ ಕಂಪ್ಯೂಟರ್‌ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಪ್ರತಿ ವರ್ಷ ಹಮ್ಮಿಕೊಳ್ಳುವ ಹ್ಯಾಕ್‌ ಮಿಟೆನ್‌2.0 ಹೆಸರಿನಲ್ಲಿ ಸೆ. 12 ರಿಂದ 13ರವರೆಗೆ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಯೋಜಿಸಿತ್ತು.

ಕಾರ್ಯಕ್ರಮಕ್ಕೆ ಸುಮಾರು 100 ಕ್ಕೂ ಹೆಚ್ಚು ತಂಡಗಳು ಮತ್ತು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮುಖ್ಯ ಅತಿಥಿಯಾಗಿ ದ್ಯಾಶಿನ್‌ಟಕ್ನೋಸಾಫ್ಟ್‌ನ ಸಿಐಒ ಕೆ.ಎಸ್‌. ರಾಜು ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಅವರು ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸುರಕ್ಷತೆ ವಿಷಯದ ಮಹತ್ವ ವಿವರಿಸಿದರು.

ಎಐ ಮತ್ತು ಸೈಬರ್‌ ಸೆಕ್ಯೂರಿಟಿ ಕೇವಲ ತಂತ್ರಜ್ಞಾನ ಮಾತ್ರವಲ್ಲ, ಅದು ಜವಾಬ್ದಾರಿಯೂ ಆಗಿದೆ. ಅವರು ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವ, ಅನುಸ್ಥಾಪಿಸುವ ಮತ್ತು ಸುರಕ್ಷಿತಗೊಳಿಸುವ ವಿಧಾನವೇ ಜನರ ವಿಶ್ವಾಸವನ್ನು ನಿರ್ಮಿಸುತ್ತವೆ ಎಂದು ತಿಳಿಸಿದರು.

ನಾಳೆಯ ತಂತ್ರಜ್ಞಾನ ಇಂದು ವಿನ್ಯಾಸಗೊಳ್ಳುತ್ತಿದೆ. ಈ ಕಾರ್ಯಕ್ರಮದಿಂದ ಮುಂದಿನ ಮಹತ್ವದ ಆವಿಷ್ಕಾರ ಹುಟ್ಟಬಹುದು. ತಂತ್ರಜ್ಞಾನದ ಭವಿಷ್ಯ ಇಂದು ಬರೆಯಲಾಗುತ್ತಿದೆ. ಅದರೊಳಗೆ ಕೋಡ್ ಇದೆ ಎಂದು ಅವರು ಹೇಳಿದರು.

ಸಂಸ್ಥೆಯ ಖಜಾಂಚಿ ಡಾ.ಡಿ.ಎಸ್. ಗುರು ಮಾತನಾಡಿ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಉಪಯಕ್ತ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೈ.ಟಿ. ಕೃಷ್ಣೇಗೌಡ, ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಪ್ರೋತ್ಸಾಹಿಸಿದರು ಮತ್ತು ವಿದ್ಯಾರ್ಥಿಗಳು ಹೆಚ್ಚು ಹ್ಯಾಂಡ್ಸ್- ಆನ್ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಿದರು.

ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಎಚ್‌.ಕೆ. ಚೇತನ್‌ ಸ್ಪರ್ಧೆಯ ಮಹತ್ವ ತಿಲಿಸಿಕೊಟ್ಟರು. ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾವೀನ್ಯತೆಯತ್ತ ಹೆಜ್ಜೆ ಹಾಕಬೇಕು ಎಂದು ಪ್ರೇರೇಪಿಸಿದರು.

ವಿಜೇತ ತಂಡಗಳಿಗೆ ಒಟ್ಟು 1 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ದ್ಯಾಶಿನ್‌ಟೆಕ್ನೋ ಸಾಫ್ಟ್‌ ನ ಸಿಐಒ ಕೆ. ರಾಜು, ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದರು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಉಚಿತವಾಗಿ ಇಂಟರ್‌ ಶಿಪ್‌ ಅವಕಾಶ ನೀಡಿದರು. ವಿಭಾಗದ ಮುಖ್ಯಸ್ಥೆ ಡಾ.ಕೆ.ಎನ್‌. ರಂಜಿತ್ ಕೃತಜ್ಞತೆ ಸಲ್ಲಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ