ವಿಜಯನಗರ ಜಿಲ್ಲೆಯಲ್ಲಿ ಮಳೆಗೆ ಕೆರೆಕೋಡಿ, ತುಂಬಿ ಹರಿದ ಹಳ್ಳ-ಕೊಳ್ಳ

KannadaprabhaNewsNetwork |  
Published : Aug 21, 2024, 12:41 AM IST
20ಎಚ್‌ಪಿಟಿ1- ಹೊಸಪೇಟೆಯ ಕಮಲಾಪುರದ ಕೆರೆ ಕೋಡಿಬಿದ್ದು ಅಪಾರ ಪ್ರಮಾಣದ ನೀರು ಬಾಳೆ ಗದ್ದೆಗಳಿಗೆ ನುಗ್ಗುತ್ತಿದೆ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ ಉತ್ತಮ ಮಳೆ ಸುರಿದಿದೆ.

ಹೊಸಪೇಟೆ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ ಉತ್ತಮ ಮಳೆ ಸುರಿದಿದೆ. ಕಮಲಾಪುರ ಕೆರೆ ಕೋಡಿಬಿದ್ದು ಅಪಾರ ಪ್ರಮಾಣದ ನೀರು ಹಂಪಿಯಲ್ಲಿ ಹರಿದಿದೆ. ಬಾಳೆ, ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ.

ಕೂಡ್ಲಿಗಿ ತಾಲೂಕಿನಲ್ಲಿ ನಾಲ್ಕು ಮನೆಗಳು ಬಿದ್ದಿದ್ದು, ಹರಪನಹಳ್ಳಿಯಲ್ಲಿ ಒಂದು ಆಕಳು ಮೃತಪಟ್ಟಿದ್ದು, ಹಳ್ಳ ದಾಟುವಾಗ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಹರಪನಹಳ್ಳಿಯ ಸುತ್ತೂರು ಕ್ರಾಸ್‌ನಿಂದ ಹೊಸಹಳ್ಳಿ ಗ್ರಾಮದ ಕಡೆಗೆ ಹೊರಟಿದ್ದ ಮಲ್ಲೇಶ್ (61) ಎಂಬವರನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಇದಕ್ಕೂ ಮುನ್ನ 25 ಶಾಲಾ ಮಕ್ಕಳು ಈ ಸೇತುವೆ ದಾಟಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಮಲಾಪುರ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ನೀರು ಹರಿದಿದ್ದು, ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲೂ ನೀರು ಬಂದಿತ್ತು.

ತಾಲೂಕಿನ ಗುಂಡಲಕೆರೆ ಹಳ್ಳ ತುಂಬಿ ಹರಿದು, ವೆಂಕಟಾಪುರ ಕ್ಯಾಂಪ್‌ನ 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯಗಳು ನೀರು ಪಾಲಾಗಿವೆ. ಹೊಸಪೇಟೆ ಹಾಗೂ ಕಂಪ್ಲಿ ನಡುವಿನ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ಐದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ರಾಜ್ಯ ಹೆದ್ದಾರಿ ಮೇಲೆ ಅಂದಾಜು ಮೂರರಿಂದ ನಾಲ್ಕು ಅಡಿ ನೀರು ಹರಿದು ಅವಾಂತರ ಸೃಷ್ಟಿಯಾಗಿತ್ತು.

ಕೂಡ್ಲಿಗಿಯಲ್ಲಿ ಗುಡೇಕೋಟೆ, ಹೊಸಹಳ್ಳಿ ಹೋಬಳಿ ಭಾಗದಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಹಲವೆಡೆ ಸೇತುವೆಗಳು ಮುಳುಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಧಾರಾಕಾರ ಮಳೆಗೆ ಕೆಲವೆಡೆ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ. ಅದೇ ರೀತಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದ್ದು, ಮನೆಗಳಿಗೂ ಹಾನಿಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ 55 ಮಿ.ಮೀ. ಮಳೆಯಾಗಿದೆ. ಕೂಡ್ಲಿಗಿಯಲ್ಲಿ 34 ಮಿ.ಮೀ. ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ. ಹಂಪಿ, ನಾಗೇನಹಳ್ಳಿ, ಬುಕ್ಕಸಾಗರ ಭಾಗದ ದೇವಸ್ಥಾನ, ಸ್ಮಾರಕಗಳಲ್ಲೂ ಮಳೆ ನೀರು ನುಗ್ಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...