ಇನಾಂ ಜಮೀನು ತೀರ್ಪು; ನಮ್ಮ ರಾಜ್ಯಕ್ಕೆ ಸಂಬಂಧ ಪಡುವುದಿಲ್ಲ: ಕೆ.ಎನ್.ರಂಗಸ್ವಾಮಿ

KannadaprabhaNewsNetwork |  
Published : Nov 28, 2024, 12:33 AM IST
27ಕೆಎಂಎನ್ ಡಿ18 | Kannada Prabha

ಸಾರಾಂಶ

ಇನಾಂ ಜಮೀನಿಗೆ ದೇವಸ್ಥಾನದ ಅರ್ಚಕರು ಒಡೆಯನಲ್ಲ. ದೇವರೇ ಒಡೆಯ ಎಂದು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ. ಈ ಆದೇಶ ನಮ್ಮ ರಾಜ್ಯದ ಇನಾಂ ಜಮೀನಿಗೆ ಸಂಬಂಧ ಪಡುವುದಿಲ್ಲ. ಇನಾಂ ಜಮೀನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಮೈಸೂರು, ಹೈದರಾಬಾದ್ ಕರ್ನಾಟಕ, ಬಾಂಬೆ, ಹಳೇ ಮೈಸೂರು ಹಾಗೂ ಮದ್ರಾಸ್ ಎಂಬ ಐದು ಕಾಯ್ದೆಗಳು ಜಾರಿಯಲ್ಲಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಇನಾಂ ಜಮೀನಿಗೆ ದೇವಸ್ಥಾನದ ಅರ್ಚಕರು ಒಡೆಯನಲ್ಲ. ದೇವರೇ ಒಡೆಯ ಎಂದು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ. ಈ ಆದೇಶ ನಮ್ಮ ರಾಜ್ಯದ ಇನಾಂ ಜಮೀನಿಗೆ ಸಂಬಂಧ ಪಡುವುದಿಲ್ಲ ಎಂದು ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಕದಬಹಳ್ಳಿ ಕೆ.ಎನ್.ರಂಗಸ್ವಾಮಿ ಹೇಳಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನಾಂ ಜಮೀನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಮೈಸೂರು, ಹೈದರಾಬಾದ್ ಕರ್ನಾಟಕ, ಬಾಂಬೆ, ಹಳೇ ಮೈಸೂರು ಹಾಗೂ ಮದ್ರಾಸ್ ಎಂಬ ಐದು ಕಾಯ್ದೆಗಳು ಜಾರಿಯಲ್ಲಿವೆ ಎಂದರು.

ಈ ಇನಾಂ ಜಮೀನುಗಳು ಸರ್ಕಾರಕ್ಕೆ ವಿಹಿತಗೊಂಡ ನಂತರ ಹಳೇ ಮೈಸೂರು ಕಾಯ್ದೆ ಪ್ರಕಾರ ಗೇಣಿದಾರನೇ ಜಮೀನಿನ ಒಡೆಯನಾಗಿರುತ್ತಾನೆ. 1955ರ ಇನಾಂ ಜಮೀನು ಕಾಯ್ದೆ 6 ಎ ಪ್ರಕಾರ ಉಳುವವನೇ ಭೂಮಿಯ ಒಡೆಯ ಹಾಗೂ ಅರ್ಚಕರು ಇನಾಂ ಜಮೀನುಗಳಿಗೆ ಗೇಣಿದಾರರೆಂದು ಸರ್ಕಾರ ಆದೇಶ ಮಾಡಿರುತ್ತದೆ ಎಂದರು.

ಸಂಘದ ರಾಜ್ಯಾಧ್ಯಕ್ಷ ವೆಂಕಟಾಚಲಯ್ಯ ಹಾಗೂ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯದ ಆದೇಶವು ಭಕ್ತಾದಿಗಳು ಅಧ್ಯಕ್ಷರ, ಕಮಿಟಿಯ ಅಥವಾ ಕಾರ್ಯದರ್ಶಿ ಅವರ ಹೆಸರಿಗೆ ದಾನ ಬರೆದಿರುವ ಜಮೀನುಗಳಿಗೆ ಮಾತ್ರ ನಿಯಮಾನುಸಾರವಾಗಿ ಅನ್ವಯಿಸುತ್ತದೆ. ಆದರೆ, ಅರ್ಚಕರಿಗೆ 10 ಎನ್‌ಸಿಯಿಂದ ಆದೇಶವಾಗಿರುವ ಜಮೀನುಗಳಿಗೆ ಅರ್ಚಕರು ಒಡೆಯನಾಗಿರುತ್ತಾರೆ ಎಂದು ಸಂಬಂಧಿಸಿದ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದರು.

ಅರ್ಚಕರ ಇನಾಂ ಜಮೀನನ್ನು ಖರೀದಿಸುವವರು ಯಾವುದೇ ಭಯ ಪಡುವ ಅಗತ್ಯವಿಲ್ಲ. ತಾಲೂಕಿನ ಹಲವು ಗ್ರಾಮಗಳಲ್ಲಿ ಇನಾಂ ಜಮೀನನ್ನು ದೇವರ ಹೆಸರಿಗೆ ಬರೆದು ಕೊಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಅರ್ಚಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಇಲಾಖೆ ಆಯುಕ್ತರ ಆದೇಶದ ಪ್ರಕಾರ ದೇವರ ಹೆಸರಿಗೆ ಇನಾಂ ಜಮೀನನ್ನು ಬರೆದು ಕೊಡಲು ಬರುವುದಿಲ್ಲ. ಹಾಗಾಗಿ ಮುಜರಾಯಿ ದೇವಾಲಯಗಳ ಅರ್ಚಕರೂ ಸಹ ಧೈರ್ಯದಿಂದಿರಿ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸಮೂರ್ತಿ, ಸಂಘದ ಗೌರವಾಧ್ಯಕ್ಷ ಸತ್ಯಪ್ಪ, ಪದಾಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಪ್ರಕಾಶ್, ಲಕ್ಷ್ಮೀನಾರಾಯಣ, ಜನಾರ್ಧನ್ ಸೇರಿದಂತೆ ಎಲ್ಲಾ ಸದಸ್ಯರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ