ಬಾಟಂ.. ಸಾಹಿತಿ ಮುಳ್ಳೂರು ನಾಗರಾಜ್ ರಸ್ತೆ ಉದ್ಘಾಟನೆ

KannadaprabhaNewsNetwork | Published : Mar 23, 2025 1:33 AM

ಸಾರಾಂಶ

ಪಟ್ಟಣದ ಭಾರ್ಗವಿ ಚಿತ್ರಮಂದಿರದ ಬಳಿಯಿಂದ ಊಟಿ ರಸ್ತೆಯ ಚರ್ಚ್ ವರೆಗಿನ ರಸ್ತೆಗೆ ಸಾಹಿತಿ, ಹೋರಾಟಗಾರ ಮುಳ್ಳೂರು ನಾಗರಾಜ್ ಹೆಸರನ್ನು ನಾಮಕರಣ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ನಂಜನಗೂಡು ಮುಳ್ಳೂರು ನಾಗರಾಜ್ ಅವರು ಬಿ.ಆರ್. ಅಂಬೇಡ್ಕರ್ ಅವರ ತತ್ವ, ಆದರ್ಶಗಳಂತೆ ನಡೆದು ಶೋಷಿತರ ಪರ ಹಲವು ಹೋರಾಟಗಳನ್ನು ನಡೆಸಿ, ನೊಂದವರಿಗೆ ಧ್ವನಿಯಾಗಿ ಜನ ಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಸಾಹಿತಿ ಮುಳ್ಳೂರು ನಾಗರಾಜ್ ರಸ್ತೆ ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಟ್ಟಣದ ಭಾರ್ಗವಿ ಚಿತ್ರಮಂದಿರದ ಬಳಿಯಿಂದ ಊಟಿ ರಸ್ತೆಯ ಚರ್ಚ್ ವರೆಗಿನ ರಸ್ತೆಗೆ ಸಾಹಿತಿ, ಹೋರಾಟಗಾರ ಮುಳ್ಳೂರು ನಾಗರಾಜ್ ಹೆಸರನ್ನು ನಾಮಕರಣ ಮಾಡಲಾಗಿದೆ, ಅವರ ಸಾಹಿತ್ಯದಿಂದ ಸ್ಪೂರ್ತಿ ಪಡೆದ ಯುವ ಜನತೆ, ಶೋಷಿತರ ಪರವಾಗಿ ಅವರು ನಡೆಸಿದ ಹೋರಾಟವನ್ನು ಸ್ಮರಿಸುತ್ತಾರೆ, ಅವರು ಕಾಲವಾದರೂ ಸಹ ಅವರ ಹೋರಾಟದ ದಾರಿ ಇನ್ನೂ ಜೀವಂತವಾಗಿದ್ದು, ಅವರ ತತ್ವ, ಆದರ್ಶ, ಚಿಂತನೆ, ಬಡವರ ಪರವಾದ ಕಾಳಜಿಯನ್ನು ಸಮಾಜ ಗೌರವಿಸುತ್ತದೆ ಎಂದು ಅವರು ಹೇಳಿದರು.ಕಾಂಗ್ರೆಸ್ ಮುಖಂಡ ಕಳಲೆ ಕೇಶವಮೂರ್ತಿ ಮಾತನಾಡಿ, ಮುಳ್ಳೂರು ನಾಗರಾಜ್ ದಸಂಸವನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸಿದವರು, ಬಡವರ, ಷೋಷಿತರ ಪರವಾದ ಗಟ್ಟಿ ಧ್ವನಿಯಾಗಿ ದೌರ್ಜನ್ಯಗಳ ವಿರುದ್ದ ಹೋರಾಡಿದವರು, ಆಗಿನ ಕಾಲದಲ್ಲಿ ನಿರುದ್ಯೋಗಿ ಯುವಜನರಿಗಾಗಿ ನಗರಸಭೆ ಮುಂಭಾಗ 18 ಮಳಿಗೆಗಳನ್ನು ನಿರ್ಮಿಸುವಂತೆ ಒತ್ತಾಯಿಸಿ, ನಿರುದ್ಯೋಗಿ ಯುವಜನರಿಗೆ ಮಳಿಗೆಗಳನ್ನು ಕಲ್ಪಿಸಿಕೊಟ್ಟವರು, ಪಟ್ಟಣದ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ನಗರಸಭೆ ಅವರನ್ನು ಸ್ಮರಿಸಿ, ಗೌರವಿಸಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಜಾನಪದ ಕಲಾವಿದ ನರಸಿಂಹಮೂರ್ತಿ, ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಮಾತನಾಡಿದರು.ಮುಳ್ಳೂರು ನಾಗರಾಜ್ ಅವರ ಪತ್ನಿ ಪುಟ್ಟಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರೆಹೆನಾಬಾನು, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಬದನವಾಳು ರಾಮು, ಜಿಪಂ ಮಾಜಿ ಸದಸ್ಯರಾದ ಪುಷ್ಪ, ಶಶಿರೇಖಾ, ಮಹದೇವಸ್ವಾಮಿ, ನಗರಸಭಾ ಸದಸ್ಯರಾದ ಸಿದ್ದಿಕ್, ಬಸವರಾಜು, ದರ್ಶನ್ ಸಂಚಾಲಕರಾದ ವಿಜಯಕುಮಾರ್, ನಿಂಗಯ್ಯ, ಮುರುಗೇಶ್, ಕುಮಾರ್, ರಾಜು, ಕಿರಣ್, ರಂಗಸ್ವಾಮಿ, ಎಂ.ಎಸ್. ಶೇಖರ್ ಇದ್ದರು.

Share this article