ಸಂಡೂರು: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಗುರುವಾರ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಜತೆಗೆ ನಿರ್ಮಾಣ ಹಂತದ ಹಲವು ಕಾಮಗಾರಿಗಳನ್ನು ವೀಕ್ಷಿಸಿದರು.
ಸಚಿವರು ಸುಶೀಲಾನಗರ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಗ್ರಾಪಂ ಕಟ್ಟಡ ಉದ್ಘಾಟಿಸಿದರು. ಸಚಿವರು ಪಟ್ಟಣದಲ್ಲಿ ₹೨೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಲೂಕು ಆಡಳಿತ ಸೌಧ, ವಸತಿ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ೨೧೭೨ ಮನೆಗಳ ಪೈಕಿ ಈಗಾಗಲೇ ಪೂರ್ಣಗೊಂಡ ೬೦೦ ಮನೆಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಚಿವರು ಪ್ರಮಾಣಪತ್ರಗಳನ್ನು ವಿತರಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಸಚಿವರು ವಿತರಿಸಿದರು.ಸಂಸದ ಈ. ತುಕಾರಾಂ ಮಾತನಾಡಿ, ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮಾಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಕ್ಷೇತ್ರದಲ್ಲಿ ಮಾಡಲಾಗಿದೆ. ೫ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ. ಸರ್ಕಾರದ ಅನುದಾನವನ್ನು ಎಲ್ಲಾ ಸಮಾಜದವರಿಗೆ ಸಮಾನವಾಗಿ ಹಂಚುವ ಕೆಲಸ ಮಾಡಿದ್ದೇನೆ. ಸಂಡೂರು ಕ್ಷೇತ್ರ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರಗಳನ್ನಾಗಿಸಲು ಶ್ರಮಿಸಲಾಗುವುದು ಎಂದರು.
ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾಗಿ ಪ್ರಮಾಣಪತ್ರಗಳನ್ನು ವಿತರಿಸಿದರು.