ಸಾಮಾಜಿಕ ಜಾಲತಾಣಗಳಿಂದ ಐಕ್ಯತೆಗೆ ಧಕ್ಕೆ ಆಗದಿರಲಿ: ಶಾಸಕ ಬಸವರಾಜು ವಿ.ಶಿವಗಂಗಾ

KannadaprabhaNewsNetwork | Published : Aug 16, 2024 12:57 AM

ಸಾರಾಂಶ

ಚನ್ನಗಿರಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ ತಹಸೀಲ್ದಾರ್ ರುಕ್ಮಿಣಿಬಾಯಿ, ಶಾಸಕ ಬಸವರಾಜ್ ವಿ.ಶಿವಗಂಗಾ ಇದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಧರ್ಮ ಎನ್ನುವುದು ವೈಯಕ್ತಿಕ ಆಚರಣೆಗಳಾಗಿದ್ದು ಅದನ್ನು ರಾಜಕೀಯ ಸಾಧನವನ್ನಾಗಿ ಬಳಕೆ ಮಾಡಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ಅವರು ಗುರುವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರ್ವ ಜನಾಂಗದ ಶಾಂತಿ ತೋಟದಂತಿರುವ ಭಾರತ ದೇಶದಲ್ಲಿ ಕಲುಷಿತ ವಾತಾವರಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೃಷ್ಟಿಸುತ್ತಾ ಇಡೀ ವಾತಾವರಣವನ್ನೆ ಕೆಡಿಸುವಂತವರ ಬಗ್ಗೆ ಜಾಗೃತರಾಗಿರಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ಅಧಿಕಾರ ನಡೆಸುವಂತಹ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿ ಪ್ರತಿ ಸರ್ಕಾರಿ ಕಚೇರಿಗಳಲ್ಲಿಯೋ ಅವರ ಭಾವಚಿತ್ರ ಹಾಕುವಂತೆ ಆದೇಶ ಮಾಡಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ತಾಲೂಕಿನ ಪ್ರಮುಖ ಕೆಲಸಗಳಲ್ಲಿ ಒಂದಾದ ಸಾಸಿವೆಹಳ್ಳಿ ಏತನೀರಾವರಿ ಕಾಮಗಾರಿ ಪ್ರಗತಿದಾಯಕವಾಗಿ ನಡೆಯುತ್ತಿದೆ ಎಂದರು.

ರಾಜ್ಯದ ಬಡ ಕೂಲಿ ಕಾರ್ಮಿಕರಿಂದ ಹಿಡಿದು ಶ್ರಮಿಕ ವರ್ಗದ ಎಲ್ಲಾ ಜನತೆಯನ್ನು ಗಮನದಲ್ಲಿಟ್ಟುಕೊಂಡು ಪಂಚಗ್ಯಾರಂಟಿ ಜಾರಿಗೆ ತಂದಿದ್ದು ನುಡಿದಂತೆ ನಡೆದ ಸರ್ಕಾರ ವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಪ್ರಶಂಶಿಸಿದರು. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿಗೊಳಿಸಿದ್ದು, ಓಪಿಎಸ್ ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ದೇಶಕ್ಕೆ ಸ್ವಾತಂತ್ರ ಬರಲು ಹೋರಾಟ ನಡೆಸಿದ ಸ್ವಾತಂತ್ರ ಹೋರಾಟಗಾರರನ್ನು ದೇಶ ಕಾಯುವ ಸೈನಿಕರನ್ನು ಸ್ಮರಿಸಿಕೊಂಡರು.

ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಕೆ.ಆರ್.ರುಕ್ಮಿಣಿಬಾಯಿ ನೆರವೇರಿಸಿ ಮಾತನಾಡಿ, ಭಾರತದೇಶದ ಐಕ್ಯತೆ ಹಿರಿಮೆ-ಗರಿಮೆ ಮತ್ತು ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ನಡೆಸಿದ ಸ್ವತಂತ್ರ ಸೇನಾನಿಗಳ ದೇಶ ಪ್ರೇಮದ ಬಗ್ಗೆ ಸಮಗ್ರವಾಗಿ ತಮ್ಮ ಸಂದೇಶ ವಾಚನದಲ್ಲಿ ತಿಳಿಸಿದರು.

ಸಮಾರಂಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ತಾಪಂ ಕಾರ್ಯನಿರ್ವಾಣಾಧಿಕಾರಿ ಬಿ.ಕೆ.ಉತ್ತಮ, ಡಿ.ವೈ.ಎಸ್.ಪಿ ರುದ್ರಪ್ಪ ಉಜ್ಜನಕೊಪ್ಪ, ಬಿಇಒ ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಪುರಸಭಾ ಸದಸ್ಯರಾದ ಅಮೀರ್ ಅಹಮದ್, ಸಿ.ಆರ್.ಅಣ್ಣಯ್ಯ, ಜಿತೇಂದ್ರ ಕಂಚುಗಾರ್, ಗೌಸ್ ಪೀರ್, ಆರ್‌ಎಫ್‌ಒ ಜಗದೀಶ್ ಸೇರಿದಂತೆ ಸರ್ಕಾರಿ ಇಲಾಖೆಗಳ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Share this article