ಶಿರಸಿ: ೪ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ತಾಲೂಕಿನ ಕಳವೆಯ ಹಂದಿಜಡ್ಡಿಯಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್‌ಎಲ್ ರಾಜ್ಯದ ಪ್ರಥಮ 4ಜಿ ಟಾವರ್ ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಕಳವೆಯ ಟಾವರ್‌ಗೆ ನೂತನ ತಂತ್ರಜ್ಞಾನ ಅಳವಡಿಸಿದ್ದು, ೪೦ ಮೀಟರ್ ಎತ್ತರವಿದೆ. ೧ರಿಂದ ೨ ಕಿಮೀ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಬರಲಿದೆ ಎಂದ ಅವರು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಬಿಎಸ್‌ಎನ್‌ಎಲ್ ಟಾವರ್‌ಗಳು ಸ್ಥಗಿತಗೊಳ್ಳುತ್ತಿದೆ ಎಂಬ ದೂರು ಬಂದ ಹಿನ್ನೆಲೆ ದೂರ ಸಂಪರ್ಕ ಇಲಾಖೆಯ ಕೇಂದ್ರ ಸಚಿವ ಜೋತಿರಾದಿತ್ಯಾ ಸಿಂಧ್ಯ ಅವರನ್ನು ಭೇಟಿಯಾಗಿ ಹೊಸ ಬ್ಯಾಟರಿ ಮತ್ತು ಜನರೇಟರ್ ನೀಡಲು ವಿನಂತಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮಂಜೂರಾತಿ ನೀಡಿದ್ದಾರೆ. ಸದ್ಯದಲ್ಲಿಯೇ ಅಳವಡಿಸುವುದಾಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಅರಣ್ಯ ಜಾಗದಲ್ಲಿ ಟಾವರ್ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಕೆಲವು ಪ್ರದೇಶದಲ್ಲಿ ಜಾಗದ ಸಮಸ್ಯೆ ನಿವಾರಣೆಯಾಗಿದೆ. ಕುಮಟಾ ತಾಲೂಕಿನ ಸಂತೆಗುಳಿಯ ಬಿಎಸ್‌ಎನ್‌ಎಲ್ ಟಾವರ್ ರಾಜ್ಯದಲ್ಲಿಯೇ ಅತಿ ಹೆಚ್ಚು ಡಾಟಾ ಬಳಕೆ ಮಾಡುವ ಟಾವರ್ ಎಂಬ ಖ್ಯಾತಿ ಪಡೆದಿದೆ. ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಉತ್ತಮಗೊಳಿಸಲು ಹಂತ ಹಂತವಾಗಿ ಟಾವರ್ ನಿರ್ಮಾಣ ಮಾಡಲಾಗುತ್ತದೆ ಎಂದರು.ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ನವೀನಕುಮಾರ ಗುಪ್ತಾ, ಬಿಂದು ಸಂತೋಷ, ಅವಿನಾಶ ಪೂಜಾರ, ವಿಕ್ರಮ್, ನಾಗರಾಜ ನಾಯ್ಕ, ಸಂತೋಷ ಚವ್ಹಾಣ, ಸ್ಥಳೀಯರಾದ ಶಿವಾನಂದ ಕಳವೆ, ಆರ್.ಡಿ. ಹೆಗಡೆ ಜಾನ್ಮನೆ ಸೇರಿದಂತೆ ಮತ್ತಿತರರು ಇದ್ದರು.ಉನ್ನತ್ತೀಕರಣ
ಜಿಲ್ಲೆಯಲ್ಲಿ ಹೊಸ ತಂತ್ರಜ್ಞಾನದ ಮೈಕ್ರೋ ತರಂಗಾಂತರಗಳ ಟಾವರ್‌ಗಳನ್ನು ಸ್ಥಾಪಿಸುವ ಜತೆಗೆ ಈಗಿರುವ ೨೫೬ ಬಿಎಸ್‌ಎನ್‌ಎಲ್ ಟಾವರ್‌ಗಳನ್ನು ೪ಜಿ ಆಗಿ ಉನ್ನತೀಕರಿಸಲಾಗುತ್ತದೆ.ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ