ಸ್ವದೇಶ ಸ್ವರ್ಗಕ್ಕಿಂತ ಮಿಗಿಲು: ಸುಗುಣೇಂದ್ರ ತೀರ್ಥರು

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಭಾವಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬಾಲ್ಯದಲ್ಲಿ ತಾವು ಶಿಕ್ಷಣ ಪಡೆದು ಕಾಪು ತಾಲೂಕಿನ ಕೆಮುಂಡೇಲು ಗ್ರಾಮದ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾವಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ, ಬಾಲ್ಯದಲ್ಲಿ ತಾವು ಶಿಕ್ಷಣ ಪಡೆದು ಕಾಪು ತಾಲೂಕಿನ ಕೆಮುಂಡೇಲು ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದರು.

ಅಲ್ಲದೆ, ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ, ತಮ್ಮ ಪೂರ್ವಾಶ್ರಮದ ತಂದೆಯವರು ಈ ದೇವರಿಗೆ ಪೂಜೆ ಮಾಡುತ್ತಿದ್ದನ್ನು ಸ್ಮರಿಸಿಕೊಂಡರು. ನಂತರ ತಮ್ಮ ಹುಟ್ಟೂರು ಮಾಣಿಯೂರಿನ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗೌರಭಿವಂದನೆ ಸ್ವೀಕರಿಸಿದರು.

ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ರಾಮನು ಚಿನ್ನದ ಲಂಕೆಯನ್ನು ಗೆದ್ದರೂ, ಅದನ್ನು ಬಿಟ್ಟು ತನ್ನ ರಾಜ್ಯ ಅಯೋಧ್ಯೆಗೆ ಹಿಂತಿರುಗಿದ. ನಾವು ಕೂಡ ವಿಶ್ವದ ನಾನಾ ದೇಶಗಳನ್ನು ನೋಡಿದ್ದೇವೆ, ಆದರೆ ನಮ್ಮ ದೇಶವೇ ಸ್ವರ್ಗಕ್ಕಿಂತ ಮಿಗಿಲು. ಅದರಲ್ಲೂ ನಮ್ಮ ಹುಟ್ಟೂರಿಗೆ ಬರುವಾಗ ಅತೀವ ಸಂತೋಷವಾಗುತ್ತದೆ ಎಂದರು.

ಬಳಿಕ ಶ್ರೀಗಳು ಎಲ್ಲೂರು ಗ್ರಾಮದ ಮಹತೋಬಾರ ಶ್ರೀ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ, 108 ಸೀಯಾಳ ಸಮರ್ಪಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕರಾದ ವೆಂಕಟರಾಜ ತಂತ್ರಿ ಮತ್ತು ವೆಂಕಟ ಭಟ್ ಪಾದಪೂಜೆ ಸಲ್ಲಿಸಿ ಗೌರವಿಸಿದರು.

ಕ್ಷಾತ್ರ ಮತ್ತು ಆಧ್ಯಾತ್ಮ ಉಪನ್ಯಾಸ:

ಪರ್ಯಾಯೋತ್ಸವದ ಅಂಗವಾಗಿ ಗುರುವಾರ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ಬೆಂಗಳೂರಿನ ಲಕ್ಷ್ಮಿ ರಾಜಕುಮಾರ್ ಅವರಿಂದ ಕ್ಷಾತ್ರ ಮತ್ತು ಆಧ್ಯಾತ್ಮ ಎಂಬ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. ನಂತರ ಶಿವಪುರದ ಶಿವಪ್ರಭಾ ಯಕ್ಷ ವಿಶ್ವ ಬಳಗ ಯಕ್ಷಗಾನ ಪ್ರದರ್ಶನಗೊಂಡಿತು. ಮಲ್ಪೆಯ ಅಯ್ಯಪ್ಪ ಭಜನಾ ಮಂಡಳಿಯವರಿಂದ ಭಜನೆ, ಅಕ್ಷತಾ ದೇವಾಡಿಗ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.ಕರ್ಣಾಟಕ ಬ್ಯಾಂಕ್‌ ಹೊರೆಕಾಣಿಕೆ: ಪುತ್ತಿಗೆ ಪರ್ಯಾಯಕ್ಕೆ ಗುರುವಾರ ಕರ್ಣಾಟಕ ಬ್ಯಾಂಕ್ ವತಿಯಿಂದ ಜೋಡುಕಟ್ಟೆಯಿಂದ ಹೊರೆಕಾಣಿಕೆ ತಂದು ಸಲ್ಲಿಸಲಾಯಿತು. ಬ್ಯಾಂಕಿನ ಸಿಬ್ಬಂದಿ ಉತ್ಸಾಹದಿಂದ ಬಾಗವಹಿಸಿದ್ದರು. ನಂತರ ಪುತ್ತಿಗೆ ಗ್ರಾಮ, ಕಾರ್ಕಳ, ಹೆಬ್ರಿ, ಪೆರ್ಡೂರು, ಹಿರಿಯಡ್ಕ, ಪರ್ಕಳ, ಮಣಿಪಾಲ ಗ್ರಾಮಸ್ಥರು ಮತ್ತು ಉಡುಪಿ ಬಸ್ ಏಜೆಂಟ್ಸ್ ಸಂಘಗಳ ವತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.

Share this article