27ಕ್ಕೆ ಬುಕ್ಕಾಂಬುಧಿ ದಾಸೋಹ ಮಂದಿರ ಉದ್ಘಾಟನೆ

KannadaprabhaNewsNetwork | Published : Sep 26, 2024 10:18 AM

ಸಾರಾಂಶ

ಪರಮ ತಪಸ್ವಿ ಕಾರಣಿಕ ಯುಗಪುರುಷ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ನಿರ್ಮಿಸಿರುವ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ದಾಸೋಹ ಮಂದಿರ ನೂತನ ಕಟ್ಟಡವನ್ನು ಸೆ.27ರ ಶುಕ್ರವಾರ ಉದ್ಘಾಟನೆ ಮಾಡಲಾಗುವುದೆಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ, ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಪರಮ ತಪಸ್ವಿ ಕಾರಣಿಕ ಯುಗಪುರುಷ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ನಿರ್ಮಿಸಿರುವ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ದಾಸೋಹ ಮಂದಿರ ನೂತನ ಕಟ್ಟಡವನ್ನು ಸೆ.27ರ ಶುಕ್ರವಾರ ಉದ್ಘಾಟನೆ ಮಾಡಲಾಗುವುದೆಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ, ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.ಜಗದ್ಗುರು ರಂಭಾಪುರಿ ಪೀಠದಲ್ಲಿ ಬುಧವಾರ ನಡೆದ ಧರ್ಮ ಸಮಾರಂಭದಲ್ಲಿ ಉದ್ಘಾಟನಾ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಬುಕ್ಕಾಂಬುಧಿ ಕ್ಷೇತ್ರಕ್ಕೆ ನಾಡಿನೆಲ್ಲೆಡೆಯಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಬಂದ ಭಕ್ತರಿಗೆ ಪೂಜಾ ಕಾರ್ಯ ನೆರವೇರಿಸಲು ಮತ್ತು ವಾಸ್ತವ್ಯ ಮಾಡಲು ಈ ಮೊದಲು ಟ್ರಸ್ಟಿನಿಂದ ಅನುಕೂಲ ಕಲ್ಪಿಸಿಕೊಡಲಾಗುತ್ತಿತ್ತು. ಇದೀಗ ಅಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ದಾಸೋಹ ಕಾರ್ಯ ನೆರವೇರಿಸುವುದಕ್ಕಾಗಿ 69*25 ಅಡಿ ವಿಸ್ತೀರ್ಣವುಳ್ಳ ಸುಮಾರು ₹20 ಲಕ್ಷ ವೆಚ್ಚದಲ್ಲಿ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ದಾಸೋಹ ಮಂದಿರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಕಟ್ಟಡ ಕಾರ್ಯಕ್ಕೆ ಹಲವಾರು ಮಠಾಧೀಶರು ಗಣ್ಯರು ಮತ್ತು ದಾನಿಗಳು ಸಹಕರಿಸಿದ್ದಾರೆ. ಈ ಕಟ್ಟಡ ಕಾರ್ಯ ತ್ವರಿತಗತಿಯಿಂದ ನಡೆಯಲು ಟ್ರಸ್ಟಿನ ಸದಸ್ಯರ ಪ್ರೋತ್ಸಾಹ ಮತ್ತು ಶ್ರೀ ಶಾಂಭವಿ ಮಹಿಳಾ ಮಂಡಳಿ ಸದಸ್ಯರ ಪರಿಶ್ರಮವೂ ಇದೆ ಎಂದರು.27ರಂದು ಬೆಳಿಗ್ಗೆ ಮಹಾತಪಸ್ವಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ರುದ್ರಾಭಿಷೇಕ ಅಷ್ಟೋತ್ತರ ನಡೆಯುತ್ತದೆ. ನೂತನ ಕಟ್ಟಡದ ವಾಸ್ತು ಶಾಂತಿಯನ್ನು ನಾಡಿನ ಶಿವಾಚಾರ್ಯರ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಧರ್ಮ ಸಮಾರಂಭವನ್ನು ಸಂಯೋಜಿಸಲಾಗಿದೆ. ಸಮಾರಂಭದ ನೇತೃತ್ವವನ್ನು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಹಾಗೂ ಸಮ್ಮುಖವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ವಹಿಸಲಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು. ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ, ಮಾಜಿ ಶಾಸಕ ಡಿ.ಎಸ್. ಸುರೇಶ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಬುಕ್ಕಾಂಬುಧಿಯ ಗುತ್ತಿಗೆದಾರ ನವೀನ್ ಕುಟುಂಬಸ್ಥರಿಂದ ದಾಸೋಹ ಸೇವೆ ನಡೆಯಲಿದೆ. ಈ ವೇಳೆ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ. ವೀರಭದ್ರಪ್ಪ, ಕಾರ್ಯದರ್ಶಿ ಎಚ್.ವಿ. ಸುರೇಶ್ ಮತ್ತಿತರರು ಹಾಜರಿದ್ದರು.

Share this article