ಕನ್ನಡಪ್ರಭ ವಾರ್ತೆ ಕಲಬುರಗಿ
ಪಕ್ಕದ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿರುವ ಶ್ರೀಶೈಲದ ಜಗದ್ಗುರು ಸಾರಂಗ ಮಠದಲ್ಲಿ ಆ.1ರಂದು ಗುರುವಂದನೆ ಸಮಾರಂಭ, ನೂತನ ವಸತಿ ಸಮುಚ್ಚಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನೆ ಆಯೋಜಿಸಲಾಗಿದೆ.ಸಾರಂಗ ಮಠದ ಪೀಠಾಧಿಪತಿಗಳಾದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನೇತತ್ವದಲ್ಲಿ ಈ ಸಮಾರಂಭ ನಡೆಯುತ್ತಿದ್ದು ನಾಡಿನ ಅನೇಕ ಮಠಗಳ ಗುರುಗಳು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.
ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಗಳು ಶ್ರೀಶೈಲಂನಲ್ಲಿರುವ ಸಾರಂಗ ಮಠಕ್ಕೆ ಪೀಠಾಧಿಪತಿಗಳಾದ 1 ವರ್ಷದ ಅವಧಿಯಲ್ಲಿ ಮಠದಲ್ಲಿ 3 ಹಂತದಲ್ಲಿ ವಸತಿ ನಿಲಯಗಳು ತಲೆ ಎತ್ತಿವೆ. ಈ ವಸತಿ ನಿಲಯಗಳಲ್ಲಿ 60 ಕೋಣೆಗಳಿದ್ದು ಸಾವಿರಾರು ಭಕ್ತರಿಗೆ ಉಳಿದುಕೊಳ್ಳಲು ಸವಲತ್ತು ಮಾಡಲಾಗಿದೆ.ಮಠದ ಪ್ರಗತಿಯ ಜೊತೆಗೇ ಶ್ರೀಶೈಲಂ ಮಲ್ಲಿಕಾರ್ಜುನ ದೇವರನ್ನು ಕಾಣಲು ಬರುವವರಿಗೆಲ್ಲರಿಗೂ ಸಾರಂಗ ಮಠದಲ್ಲಿ ಸುಸಜ್ಜಿತ ಸವಲತ್ತಿನ ಅನುಕೂಲ ಕಲ್ಪಿಸಲಾಗುತ್ತಿದೆ.
ಆ.1ರಂದು ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಇರಿಗೆ ಗುರುವಂದನೆ ಲಮಾರಂಭ ಹಮ್ಮಿಕೊಳ್ಳಲಾಗಿದೆ. ಭಾಲ್ಕಿ ಹಿರೇಮಠ ಗುರುಬಸವ ಪಟ್ಟದ್ದೇವರು, ಕಲ್ಮಠದ ಸಿದ್ದಮಲ್ಲ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮಿಗಳು, ನೆಲಗಿಯ ಸಿದ್ದಲಿಂಗ ಸ್ವಾಮಿಗಳು, ಜೇರಟಗಿಯ ಮಹಾಂತ ಸ್ವಾಮಿಗಳು, ಕಂಬಳೇಶ್ವರ ಮಠದ ಸೋಮಶೇಖರ ಸ್ವಾಮಿಗಳು, ಲಾಡಮುಗಳಿಯ ವಿರಕ್ತ ಮಠದ ಬಸವಲಿಂಗ ಸ್ವಾಮಿಗಳು, ಮಟಕಿಯ ಸಿದದಲಿಂಗ ಸ್ವಾಮಿಗಳು ಗುರುವಂದನೆಯಲ್ಲಿ ಉಪಸ್ಥಿತರಿರುತ್ತಾರೆ.ದೇವೀಂದ್ರಪ್ಪ ಗೌಡಗೇರಿಯವರ ಸ್ಮರಣಾರ್ಥ 3 ಕೋಟಿ ರು ವೆಚ್ಚದಲ್ಲಿ ತಲೆ ಎತ್ತಿರುವ 16 ಕೋಣೆಗಳ ವಸತಿ ಸಮುಚ್ಚಯ ಉದ್ಘಾಟನೆ ಬಯಲು ಗ್ರಂಥಾಲಯ ಉದ್ಘಾಚನೆ ನಡೆಯಲಿದೆ ಎಂದು ಸಾರಂಗಧರ ಸ್ವಾಮೀಗಳು ಹೇಳಿದ್ದಾರೆ. ಸಚಿವರಾದ ಶರಣಬಸವಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್, ಎಂಎಲ್‌ಸಿ ತಿಪ್ಪಣ್ಣ ಕಮಕನೂರ್, ಮಾಜಿ ಶಾಸಕ ದತ್ತಾತ್ರೇಯ ರೇವೂರ್, ದೇವೀಂದ್ರಪ್ಪ ಗೌಡಗೇರಿ ಪಾಲ್ಗೊಳ್ಳುತ್ತಿದ್ದಾರೆ.
-------ತೆಲುಗನ್ನಡ ನೆಲದಲ್ಲಿ ಕಾಲಿಟ್ಟ ಕಲಬುರಗಿ ಬಯಲು ಗ್ರಂಥಾಲಯ
ಕಲಬುರಗಿಯಲ್ಲಿರುವ ಪತ್ರಕರ್ತ ಸುಭಾಸ ಬಣಗಾರ್ ಅವರ ಪರಿಕಲ್ಪನೆಯಲ್ಲಿ ಕಳೆದ 24 ವರ್ಷದಿಂದ ಆರಂಭವಾಗಿರುವ ಬಯಲು ಗ್ರಂಥಾಲಯ ವ್ಯವಸ್ಥೆ ಶ್ರೀಶೈಲಂನಲ್ಲಿ ಅದಾಗಲೇ 1 ತಿಂಗಳಿಂದ ಶುರುವಗಿದೆ. ಇಲ್ಲಿಗೆ ಕನ್ನಡದ ಪತ್ರಿಕೆಗಳನ್ನು ನಿತ್ಯ ಬಸ್ಸಿನ ಮೂಲಕ ಕಳುಹಿಸಲಾಗುತ್ತಿದೆ. ಇದರಿಂದಾಗಿ ಆಂಧ್ರದ ತಲಗು ನಾಡಲ್ಲಿಯೂ ಕನ್ನಡ ಪತ್ರಿಕೆ, ಸುದ್ದಿಗಳು ಭಕ್ತರಿಗೆ ದೊರಕುತ್ತಿವೆ. ಸಾರಂಗ ಮಠದ ಅಂಗಳದಲ್ಲಿಯೇ ಬಯಲಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ಬಣಗಾರರ ಬಯಲು ಗ್ರಂಥಾಲಯ ಆಂಧ್ರದ ತೆಲುಗನ್ನಡ ನೆಲದಲ್ಲಿಯೂ ಪದಾರ್ಪಣೆ ಮಾಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಭಾಸ ಬಣಗಾರ್ ಅವರು ತಮ್ಮ ಬಯಲು ಗ್ರಂಥಾಲಯ ಪರಿಕಲ್ಪನೆ ರಾಜ್ಯಾದ್ಯಂತ ಜನಜನಿತವಾಗಿದ್ದು, ಇದೀಗ ಶ್ರೀಶೈಲಂನಲ್ಲಿ ಆರಂಭವಾಗೋ ಮೂಲಕ ಆಂಧ್ರಕ್ಕೂ ಕಾಲಿಟ್ಟಿದೆ. ಈ ಅವಕಾಶಕ್ಕಾಗಿ ತಾವು ಸಾರಂಗಧರ ಶ್ರೀಗಳನ್ನು ಅಭಿನಂದಿಸೋದಾಗಿ ಹೇಳಿದ್ದಾರೆ. ಬಯಲು ಗ್ರಂಥಾಲಯದಿಂದ ಕನ್ನಡ ಭಾಷೆ, ಸಂಸ್ಕೃತಿ ಬೆಳೆಯುತ್ತದೆ. ಓದುವ ಸಂಸ್ಕೃತಿಯೂ ವಿಸ್ತಾರವಾಗುತ್ತದೆ ಎಂದು ಬಣಗಾರ್ ಹೇಳಿದರು.