ಬಲ್ಲಮಾವಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

KannadaprabhaNewsNetwork | Published : Jan 17, 2025 12:45 AM

ಸಾರಾಂಶ

ಬಲ್ಲಮಾವಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಭಾರತ ನಿರ್ಮಾಣ ಸೇವಾ ಕೇಂದ್ರ ಸಂಜೀವಿನಿ ಶೆಡ್ ಹಾಗೂ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರ ಕಟ್ಟಡವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗ್ರಾಮ ಮಟ್ಟದಿಂದ ಕೇಂದ್ರದ ವರೆಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪಾತ್ರ ಮತ್ತು ಜವಾಬ್ದಾರಿ ಪ್ರಮುಖ ಎಂದು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಭಾರತ ನಿರ್ಮಾಣ ಸೇವಾ ಕೇಂದ್ರ ಸಂಜೀವಿನಿ ಶೆಡ್ ಹಾಗೂ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಕಾರ್ಯಗಳ ಬಗ್ಗೆ, ಕಟ್ಟಡ ಕಾಮಗಾರಿಗಳ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಸಾರ್ವಜನಿಕರು ವಿಶೇಷ ಕಾಳಜಿ ವಹಿಸಬೇಕು. ವಿರಾಜಪೇಟೆ ಕ್ಷೇತ್ರದಲ್ಲಿ ರಸ್ತೆ ಕಟ್ಟಡ ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ 185 ಗ್ರಾಮೀಣ ರಸ್ತೆಗಳನ್ನು 85 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ಗುಣಮಟ್ಟದ ಕಾಮಗಾರಿ ಆಗಬೇಕು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ ಎಂದರು.

ಕೊಡಗಿನಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡ ಬಲಮಾವಟಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಯ ಸದಸ್ಯರು ತೆಗೆದುಕೊಂಡ ಕಾಳಜಿಯೇ ಕಾರಣ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಗ್ರಾಮ ಪಂಚಾಯಿತಿ ಮೂಲಕ ಸಿಗಬೇಕು. ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ಇಲ್ಲದಿರುವ ಬಗ್ಗೆ ಗ್ರಾಮಸ್ಥರಲ್ಲಿ ಕೊರಗು ಇತ್ತು. ಅದು ಈಗ ನಿವಾರಣೆಯಾಗಿದೆ ಎಂದರು.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಪಿ ಶಾಂತಿ ಅಧ್ಯಕ್ಷತೆ ವಹಿಸಿದ್ದರು.

ನೇತಾಜಿ ಪ್ರೌಢಶಾಲೆ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಎಂ. ಉಮೇಶ್, ಸ್ಥಳದಾನಿಗಳಾದ ಚಂಗೇಟಿರ ಕುಟುಂಬದ ಹಿರಿಯರಾದ ಚೆಂಗೆಟಿರ ಪೆಮ್ಮಯ್ಯ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮುಕ್ಕಾಟಿರ ಸರೋಜಾ ಕಾಳಪ್ಪ, ಹಿರಿಯ ಮಂಡಲ ಪಂಚಾಯಿತಿ ಪ್ರಧಾನ ಮೂವೆರ ನಾಣಪ್ಪ, ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ಶೇಖರ್ ಮತ್ತಿತರರಿದ್ದರು.

ಗ್ರಾಮ ಪಂಚಾಯತಿ ಸದಸ್ಯ ಮಚ್ಚೂರ ರವೀಂದ್ರ ಪ್ರಾಸ್ತಾವಿಕ ಮಾತನಾಡಿದರು. ಡಿಜಿಟಲ್ ಗ್ರಂಥಾಲಯದ ಕುರಿತು ಗ್ರಾಮ ಪಂಚಾಯಿತಿ ಸದಸ್ಯೆ ಬಾಳೆಯಡ ದಿನಾ ಮಾಯಮ್ಮ ಮಾಹಿತಿ ನೀಡಿದರು.

ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚೌರಿರ ಪೂಣಚ್ಚ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಪವನ್‌ ನಿರೂಪಿಸಿದರು. ಪಂಚಾಯಿತಿ ಸದಸ್ಯ ಮುಕ್ಕಟಿರ ಸುತನ್ ಸುಬ್ಬಯ್ಯ ವಂದಿಸಿದರು.

Share this article