ಮರ ಭೂಮಿಗೆ ದೇವನಿತ್ತ ವರ: ಜಾದವ್ ಪಾಯೆಂಗ್‌

KannadaprabhaNewsNetwork | Published : Jan 17, 2025 12:45 AM

ಸಾರಾಂಶ

ಗ್ರೀನ್ ಇಂಡಿಯಾ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಹಸಿರು ಇಲ್ಲದೆ ಬದುಕಲು ಸಾಧ್ಯವಿಲ್ಲ.

ಗ್ರೀನ್ ಇಂಡಿಯಾಗೆ ಪ್ರತಿಯೊಬ್ಬರು ಶ್ರಮಿಸಿ । ಫಾರೆಸ್ಟ್ ಮ್ಯಾನ್‌ ಆಫ್‌ ಇಂಡಿಯಾ ಖ್ಯಾತಿಯ ಪದ್ಮಶ್ರೀ ವಿಜೇತ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮರ ಭೂಮಿಗೆ ದೇವನಿತ್ತ ವರ ಎಂದು ಫಾರೆಸ್ಟ್ ಮ್ಯಾನ್‌ ಆಫ್‌ ಇಂಡಿಯಾ ಖ್ಯಾತಿಯ ಪದ್ಮಶ್ರೀ ಜಾದವ್ ಪಾಯೆಂಗ್‌ ಹೇಳಿದರು.

ನಗರದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರೀನ್ ಇಂಡಿಯಾ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಹಸಿರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆ ಹಸಿರು ಉಳಿಸಲು ಮರ ದೇವನಿತ್ತ ವರವಾಗಿದ್ದು, ಪ್ರತಿಯೊಬ್ಬರು ಗಿಡಮರ ಬೆಳೆಸುವ ಮೂಲಕ ಗ್ರೀನ್ ಇಂಡಿಯಾ ಮಾಡಬೇಕಾಗಿದೆ. ಗಿಡ, ಮರ ಬರಿ ಅಲ್ಲ, ಭೂಮಿಗೆ ದೇವನಿತ್ತ ವರ. ಕ್ಲೀನ್ ಇಂಡಿಯಾ,ಗ್ರೀನ್ ಇಂಡಿಯಾ ಗ್ರೇಟ್ ಇಂಡಿಯಾ ಮಾಡಬೇಕಾಗಿದೆ ಎಂದರು.

ನನ್ನ ಕಣ್ಣೆದುರಿಗೆ ಪ್ರಾಣಿ, ಪಕ್ಷಿಗಳು ಸಾವನ್ನಪ್ಪುವುದನ್ನು ನೋಡಿ ಅದರಿಂದ ನೊಂದುಕೊಂಡೆ. ಅದಕ್ಕಾಗಿ ಏನು ಮಾಡಬೇಕು ಎಂದು ಯೋಚಿಸಿದಾಗ ಮನುಷ್ಯನಿಂದ ನಾಶವಾದ ಗಿಡಮರ ಬೆಳೆಸಲು ತೀರ್ಮಾನಿಸಿದೆ. ಹಾಗಂತ ನಾನು ಕಾಡು ಬೆಳೆಸುತ್ತೇನೆ ಅಂದುಕೊಂಡಿರಲಿಲ್ಲ. ಆದರೆ ನಾನು ನಿತ್ಯ ಗಿಡಮರ ಬೆಳೆಸುವ, ಉಳಿಸುವ ಕಾರ್ಯ ಮಾಡಿದೆ. ಅದು ಇಂದು ಬೃಹತ್ ಕಾಡಾಗಿದೆ. ಹಾಗೆಯೇ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಐದುನೂರು ಮರ ಬೆಳೆಸಿದರೆ ಇಡೀ ದೇಶ ಹಸಿರುಮಯವಾಗುತ್ತದೆ. ಪರಿಪೂರ್ಣ ಹಸಿರು ಆದರೆ ನಮಗೆ ರೋಗರುಜೀನೆ ಬರುವುದಿಲ್ಲ. ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಕ್ಲೀನ್ ಇಂಡಿಯಾ, ಗ್ರೀನ್ ಇಂಡಿಯಾ , ಗ್ರೇಟ್ ಇಂಡಿಯಾ ಮಾಡಲು ಶ್ರಮಿಸೋಣ. ಇದಕ್ಕಾಗಿ ತಮ್ಮಲ್ಲಿ ನಾನು ಮನವಿ‌ ಮಾಡಿಕೊಳ್ಳುತ್ತೇನೆ. ಪ್ರತಿಯೊಬ್ಬರು ಈ ಕಾರ್ಯದಲ್ಲಿ ಕೈಜೋಡಿಸಿ ಎಂದರು.

ದೇವರು ಬಹುದೊಡ್ಡ ವರ ನೀಡಿದ್ದಾನೆ.‌ ಅದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಕಾಡು ಎನ್ನುವುದು ಕೇವಲ ಗಾಳಿ ನೀಡುವುದಲ್ಲ. ಅದು ನಿಸರ್ಗದ ಸಮತೋಲನ ಕಾಪಾಡುತ್ತದೆ ಎಂದರು.

ಹವಾಮಾನ ಬದಲಾವಣೆಯಿಂದ ಇಡೀ ವಿಶ್ವ ತತ್ತರಿಸಿದೆ. ಮುಂಬೈ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ರಾಜ್ಯಗಳ ಪಟ್ಟಣಗಳು ಮುಂದೆ ಮುಳುಗುವ ಸಾಧ್ಯತೆ ಇದೆ. ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹವಾಮಾನಗಳು ಬದಲಾವಣೆಯಾಗಿವೆ. ಅಂಟಾರ್ಟಿಕ ಕರಗ ತೊಡಗಿದೆ. ಇದನ್ನು ತಡೆಯಬೇಕೆಂದರೆ ಪ್ರತಿಯೊಬ್ಬರೂ ಮರ ನೆಡಬೇಕು. ಈ ಕಾರ್ಯದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಬೇಕಿದೆ. ಮಕ್ಕಳಲ್ಲಿ ಅರಣ್ಯೀಕರಣದ ಜಾಗೃತಿ ಮೂಡಿಸಬೇಕು. ಅವರ ಜನ್ಮದಿನದಂದು ಕೇಕ್ ಕತ್ತರಿಸುವ ಬದಲು ಗಿಡ ನೆಡುವ ಅಭಿಯಾನ ಮಾಡಬೇಕು. ನೀವೆಲ್ಲ ನನ್ನ ಜೊತೆ ಕೈಜೋಡಿಸಬೇಕು. ಇದೀಗ ನಾನು ಗ್ರೀನ್ ಇಂಡಿಯಾ, ಗ್ರೀನ್ ವಲ್ಡ್ ಮಾಡಲು ನಿಶ್ಚಯಿಸಿದ್ದೇನೆ. ಶಾಲಾ ಪಠ್ಯಗಳಲ್ಲಿ ಗಿಡ ನೆಡುವ ಅರಣ್ಯೀಕರಣದ ಬಗ್ಗೆ ಪಠ್ಯಗಳು ಹೆಚ್ಚಾಗಬೇಕು ಎಂದರು.

ಗಿಡ, ಮರ, ಭೂಮಾತೆಯನ್ನು ದೇವರೆಂದು ಪರಿಗಣಿಸುವ ಮನಸ್ಥಿತಿ ಬರಬೇಕು. ಮರವನ್ನು ಬೆಳೆಸುವ ಕಾರ್ಯ ಆಗಬೇಕು. ಯಾರೂ ಕಡಿಯಬಾರದು. ಮರವು ದೇವರು ನಮಗೆ ಕೊಟ್ಟ ವರವಾಗಿದೆ. ಮರಗಳನ್ನು ನಾವು ಬೆಳೆಸಿ, ಉಳಿಸಬೇಕು ಎಂದರು.

Share this article