ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ದೆವ್ವಕ್ಕೆ ಹೋಲಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ.
ಸೋಮವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಬಿ.ವೈ.ವಿಜಯೇಂದ್ರ, ‘ದೆವ್ವದ ಮನಸ್ಥಿತಿಯವರಿಂದ ದೈವದ ಮಾತು ಹೊರಬರಲು ಸಾಧ್ಯವೇ’ ಎಂದು ತೀಕ್ಷ್ಣವಾಗಿ ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು ಕಣ್ಣಿದ್ದೂ ಕುರುಡರಂತೆ, ಕಿವಿ ಇದ್ದೂ ಕಿವುಡರಂತೆ ನಟಿಸುತ್ತಿದ್ದಾರಾ ಎಂಬ ಅನುಮಾನವಿದೆ. ಕಳೆದೆರಡು ವರ್ಷಗಳಲ್ಲಿ ಅವರ ಇಲಾಖೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಇಲ್ಲ. ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳನ್ನೇ ಚರ್ಚಿಸುತ್ತಾರೆ ಎಂದ ವಾಗ್ದಾಳಿ ನಡೆಸಿದರು.
ಅಮೃತ ಹೊರಬರಲು ನಂಜು ನುಂಗಿದ ವಿಷಕಂಠನಂತೆ ಹಿಂದೂ ವಿರೋಧಿ ಕಾರ್ಕೋಟಕ ವಿಷ ಜಂತುಗಳ ಮೆಟ್ಟಿ ನಿಂತಿರುವ ಆರ್‌ಎಸ್‌ಎಸ್ ಕುಟುಕುವುದೇ ಮರಿ ಚೇಳೊಂದರ ಚೇಷ್ಟೆಯಾಗಿದೆ. ರಾಜಕಾರಣದಲ್ಲಿ ನಿರಂತರ ರಾಜಕೀಯ ಅಧಿಕಾರ ಅನುಭವಿಸುತ್ತಾ ಬಂದಿರುವ ಖರ್ಗೆ ಕುಟುಂಬದ ಕೊಡುಗೆ ಏನೆಂದರೆ ಭಾರತದ ಭೂಪಟದಲ್ಲಿ ‘ಕಲ್ಯಾಣ ಕರ್ನಾಟಕ’ವನ್ನು ಅತ್ಯಂತ ಹಿಂದುಳಿಯುವಂತೆ ಮಾಡಿದ್ದು ಎಂದರು.
ಕೀಳು ಅಭಿರುಚಿಯ ತೆವಲು:
ಸಚಿವರಾದ ನಂತರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆ ಕೊಡುಗೆ ಏನು? ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಕೀಳು ಪ್ರಚಾರದ ತೆವಲಿನಿಂದ ಆರ್‌ಎಸ್‌ಎಸ್ ಗುರಿಯಾಗಿಸಿ ಕೀಳು ಅಭಿರುಚಿಯ ಟೀಕೆಯ ತೆವಲು ಹೆಚ್ಚಿಸಿಕೊಂಡಿದ್ದಾರೆ. ಅವರ ಆರ್‌ಎಸ್‌ಎಸ್ ವಿರೋಧಿ ಮಾತುಗಳಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳನ್ನು ಮೆಚ್ಚಿಸುವ, ಹಿಂದೂ ಧರ್ಮವನ್ನು ಅಪಮಾನಿಸುವ ಹಿನ್ನೆಲೆಯ ಮನಸ್ಥಿತಿ ಅಡಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹಿಂದೂ ಪರಂಪರೆ ಮತ್ತು ಹಿಂದೂ ಪರ ಸಂಘಟನೆಗಳನ್ನು ತೇಜೋವಧೆ ಮಾಡುವುದಕ್ಕಾಗಿಯೇ ಪ್ರಿಯಾಂಕ್ ಖರ್ಗೆಯಂಥವರನ್ನು ವಕ್ತಾರರುಗಳನ್ನಾಗಿ ನೇಮಿಸಿದಂತಿದೆ. ದೈವನಿಂದನೆ ಹಾಗೂ ದೈವಭಕ್ತರನ್ನು ಕಾಡುವುದೇ ರಾಕ್ಷಸೀ ಕುಲದ ಕೃತ್ಯವಾಗಿತ್ತು. ಅದೇ ಮಾದರಿಯಲ್ಲಿ ಇಂದು ರಾಷ್ಟ್ರ ಭಕ್ತ ಸಂಘಟನೆ ಆರ್‌ಎಸ್‌ಎಸ್ ನಿಂದಿಸುವುದು, ಹಿಂದೂ ಧರ್ಮ ಅವಹೇಳನ ಮಾಡುವುದು, ಹಿಂದೂಪರ ಕಾರ್ಯಕರ್ತರು ಹಾಗೂ ದಾರ್ಶನಿಕರನ್ನು ಗುರಿ ಮಾಡುವುದು ಕಾಂಗ್ರೆಸ್‌ನ ಹಿಡನ್ ಅಜೆಂಡಾ ಆಗಿದೆ ಎಂದರು.
ಕಾಂಗ್ರೆಸ್ ಗಿಡ ಎಂದೇ ಹೆಸರಾದ ಪ್ರಾರ್ಥೇನಿಯಂ ನಂಥ ಕಾಂಗ್ರೆಸ್ ಪಕ್ಷದ ‘ಕಳೆ’ಯನ್ನು ಜನತೆ ಈಗಾಗಲೇ ದೇಶದಲ್ಲಿ ಬಹುತೇಕ ಕಿತ್ತೆಸೆದಿದ್ದಾರೆ. ರಾಜ್ಯದಲ್ಲೂ ಜನ ಕಳೆ ಕೀಳಲು ಆರಂಭಿಸಿದ್ದಾರೆ. 2028 ರಲ್ಲಿ ಅದು ಪರಿಪೂರ್ಣಗೊಳ್ಳಲಿದೆ. ಆಗ ಪ್ರಿಯಾಂಕ್ ಖರ್ಗೆ ಯಾವ ನೋಂದಣಿ ಕಚೇರಿ ಮುಂದೆ ನಿಂತಿರುತ್ತಾರೋ ಕಾದು ನೋಡೋಣ ಎಂದು ವಿಜಯೇಂದ್ರ ತಿರುಗೇಟು ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 50 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಯಾವ ರೀತಿ ಅಭಿವೃದ್ಧಿಯಾಗಿದೆ? ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಎಷ್ಟು ಅಭಿವೃದ್ಧಿಯಾಗಿದೆ? ಯಡಿಯೂರಪ್ಪ ಅವರು ಕಲಬುರಗಿ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಅವರೊಂದಿಗೆ ಚರ್ಚಿಸಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ಆಕಾಶಕ್ಕೆ ಉಗಿದಂತೆ-ಅಶೋಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಂದನೆ ಮಾಡುವುದೂ ಒಂದೇ ಆಕಾಶಕ್ಕೆ ಉಗಿಯುವುದೂ ಒಂದೇ ಎಂದು ಆರ್.ಅಶೋಕ್ ಹೇಳಿದ್ದಾರೆ.
ಆರ್‌ಎಸ್ಎಸ್ ಅನ್ನು ನ್ನು ವಾಚಾಮಗೋಚರವಾಗಿ ಬೈದರೆ, ನಿರಂತರವಾಗಿ ನಿಂದಿಸಿದರೆ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಪಕ್ಷದಲ್ಲಿ ಏನಾದರೂ ಸ್ಥಾನಮಾನ ಪಡೆಯಬಹುದೆಂಬ ಭ್ರಮೆಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಅದನ್ನೇ ನಿತ್ಯ ಚಾಳಿ ಮಾಡಿಕೊಂಡಿದ್ದಾರೆ. ನಾಲ್ಕು ದಶಕಗಳಿಂದ ಕಲ್ಯಾಣ ಕರ್ನಾಟಕದ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ ‘ನಾಳೆ ಬಾ’ ಎಂಬ ಶಾಶ್ವತವಾದ ಬೋರ್ಡು ಹಾಕಿಕೊಂಡು ಕಲ್ಯಾಣ ಕರ್ನಾಟಕದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ದೆವ್ವಗಳನ್ನು ಓಡಿಸುವ ದಿನ ಬಹಳ ದೂರವಿಲ್ಲ ಎಂದು ಅವರು ಪತ್ರಿಕಾ ಹೇಳಿಕೆ ಮೂಲದ ಹರಿಹಾಯ್ದಿದ್ದಾರೆ.
ಆರೆಸ್ಸೆಸ್ ಅಂದ್ರೆ ದೇಶಭಕ್ತರ ಕೂಟ-ಛಲವಾದಿ:
ಡೆವಿಲ್ಸ್ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುವ ಗುಲಾಮರು ಯಾರಾದರೂ ಇದ್ದರೆ ಈ ರೀತಿಯ ಮಾತುಗಳು ಅವರಿಂದ ಬರುತ್ತವೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೀವು ಯಾವ ಸಮುದಾಯದಿಂದ ಬಂದಿದ್ದೀರೋ ಆ ಸಮುದಾಯದ ಜನ ಸಂಕಷ್ಟದಲ್ಲಿದ್ದಾರೆ. ನಿಮ್ಮ ಸರ್ಕಾರ ದಲಿತರ 39 ಸಾವಿರ ಕೋಟಿ ಹಣ ನುಂಗಿದೆ. ಇದರ ಕುರಿತು ನೀವು ಒಂದು ದಿನವೂ ಪ್ರಸ್ತಾಪ ಮಾಡಿಲ್ಲವೇಕೆ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.
ಆರೆಸ್ಸೆಸ್-ಬಿಜೆಪಿ ಬಗ್ಗೆ ಮಾತನಾಡಲು ನಿಮಗೆ ಏನು ಯೋಗ್ಯತೆ ಇದೆ? ಆರೆಸ್ಸೆಸ್ ದೇಶಭಕ್ತರ ಕೂಟ. ಅದನ್ನು ದೆವ್ವಕ್ಕೆ ಹೋಲಿಸಿದ್ದೀರಿ. ಅದು ದೆವ್ವವಲ್ಲ, ದೇವರ ಆಶೀರ್ವಾದದಿಂದ ಇರುವ ಕೂಟ ಎಂದು ತಿಳಿಸಿದರು.
ಹೊಟ್ಟೆ ಉರಿಯಿಂದ ಮಾತು-ರವಿಕುಮಾರ್:
ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಕುರಿತು ದ್ವೇಷ, ಹೊಟ್ಟೆ ಉರಿಯಿಂದ ಮಾತನಾಡುತ್ತಿದ್ದಾರೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷವಾಗಿದೆ. ಇವತ್ತು ವಿಶ್ವದಲ್ಲಿ ನಂಬರ್ ಒನ್ ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್. ಆರ್‌ಎಸ್‌ಎಸ್‌ನಿಂದ ಹೊರಬಂದವರು ದೇಶಸೇವೆ; ಸಮಾಜಸೇವೆ ಮಾಡುತ್ತಾರೆ. ಅದನ್ನು ನೋಡಿ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ ಒಂದಾರು ತಿಂಗಳು ಆರೆಸ್ಸೆಸ್ ಕುರಿತು ಅಧ್ಯಯನ ಮಾಡಲು ಬರಬೇಕು.ಆಗ ನಿಮಗೆ ಆರೆಸ್ಸೆಸ್ ಬಗ್ಗೆ ಗೊತ್ತಾಗಬಹುದು ಎಂದರು.
ಏನಿದು ವಿವಾದ?
- ಆರೆಸ್ಸೆಸ್ ದೆವ್ವವಾದರೆ, ಬಿಜೆಪಿ ಅದರ ನೆರಳು. ನೆರಳಿನ ಬದಲು ದೆವ್ವದ ಜತೆ ಗುದ್ದಾಡಿ
- ಆಗ ದೇಶ ತನ್ನಿಂತಾನೇ ಉದ್ಧಾರ ಆಗುತ್ತೆ. ಆರೆಸ್ಸೆಸ್ ಇಲ್ದಿದ್ರೆ ಜೆಡಿಎಸ್‌ಗಿಂತ ಬಿಜೆಪಿ ಕಡೆ
- ದೇಶದ ಯಾವುದೋ ಕ್ಲಬ್ ನೋಂದಣಿ ಆಗುತ್ತೆ, ಆರೆಸ್ಸೆಸ್ ಏಕೆ ನೋಂದಣಿ ಆಗಬಾರದು?
- ಆರೆಸ್ಸೆಸ್‌ಗೆ ವಿದೇಶದಿಂದ ಅಕ್ರಮ ಹಣ ವರ್ಗಾವಣೆ ಆಗ್ತಿದೆ ಎಂದಿದ್ದ ಕರ್ನಾಟಕ ಸಚಿವ
- ಈ ಹೇಳಿಕೆಗಳ ವಿರುದ್ಧ ಮುಗಿಬಿದ್ದ ಬಿಜೆಪಿಗರು । ಇದು ಆಕಾಶಕ್ಕೆ ಉಗಿದಂತೆ ಎಂದು ಕಿಡಿ
ಕಾಂಗ್ರೆಸ್ ನೋಂದಣಿ
ರದ್ದತಿ ಬಗ್ಗೆ ಚಿಂತಿಸಿ
ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ತಂದೆ ಅಧ್ಯಕ್ಷರಾಗಿರುವ, ರಾಜಕೀಯ ಭೂಪಟದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷದ ನೋಂದಣಿ ರದ್ದತಿಯಾಗದಂತೆ ಮೊದಲು ಎಚ್ಚರ ವಹಿಸಿ. ನಂತರ ಇತರ ನೋಂದಣಿ ಬಗ್ಗೆ ತಲೆಕೆಡಿಸಿಕೊಳ್ಳುವಿರಂತೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
