ಹಿಂದೂ ಧರ್ಮದ ಜೊತೆಗೆ ಎಲ್ಲ ಮತಗಳ ಬಗ್ಗೆ ಗೌರವ ಭಾವನೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮರ್ಪಣಾ ಭಾವ ಇಂದಿನ ಸಮಾಜಕ್ಕೆ ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಹಿಂದೂ ಧರ್ಮದ ಜೊತೆಗೆ ಎಲ್ಲ ಮತಗಳ ಬಗ್ಗೆ ಗೌರವ ಭಾವನೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮರ್ಪಣಾ ಭಾವ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಭಾನುವಾರ ತಾಲೂಕಿನ ಸ್ವಾದಿ ಜೈನಮಠದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಭೈರುಂಬೆ ಮಂಡಲದ ವತಿಯಿಂದ ಆಯೋಜಿಸಿದ್ದ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.
ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಸದಾ ಕಾಲ ಇರುವ ಸಂಸ್ಕೃತಿಯೇ ಹಿಂದೂ ಸಂಸ್ಕೃತಿಯಾಗಿದ್ದು, ಇದು ಎಲ್ಲ ಧರ್ಮಗಳಿಗೂ ಮೂಲವಾಗಿದೆ. ಈ ಧರ್ಮ ಅವಿನಾಶಿಯಾದದ್ದು ಎಂದರು. ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಎಲ್ಲರೂ ಒಂದು ಎಂಬ ಭಾವನೆಯೇ ಹಿಂದೂತ್ವವಾಗಿದೆ. ಈ ಸಂಸ್ಕೃತಿ ಪ್ರಪಂಚದಾದ್ಯಂತ ದಾರಿ ದೀಪವಾಗಿ ಪ್ರಜ್ವಲಿಸಬೇಕಿದೆ ಎಂದು ಹಾರೈಸಿದರು.ಆರ್‌ಎಸ್‌ಎಸ್ ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಹ ಸಂಯೋಜಕ ರಘುನಂದನ ಮಾತನಾಡಿ, ಸ್ವಾಭಿಮಾನ ಮತ್ತು ಸಂಘಟನೆಯ ಕೊರತೆ ನೀಗಿಸಿ ಬಲಿಷ್ಠ ಸಮಾಜ ನಿರ್ಮಿಸುವ ಉದ್ದೇಶದೊಂದಿಗೆ ಸಂಘ ಆರಂಭವಾಗಿ ಶತಮಾನ ಪೂರೈಸುತ್ತಿದೆ. ಒಂದೆಡೆ ಭಾರತದ ಜ್ಞಾನ ಶಕ್ತಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಯುವ ಪೀಳಿಗೆಯಲ್ಲಿ ಮೌಲ್ಯಗಳ ಅಧಃಪತನ ಕಾಣುತ್ತಿರುವುದು ಆತಂಕಕಾರಿ. ಇಂತಹ ಕಾಲಘಟ್ಟದಲ್ಲಿ ಹಿಂದುವು ತನ್ನ ಪರಿವಾರವನ್ನು ಸಂಸ್ಕಾರಯುತವಾಗಿ ಇಟ್ಟುಕೊಳ್ಳುವ ಮೂಲಕ ಸಮಾಜದ ಜಾಗೃತಿ ಮಾಡಬೇಕಿದೆ ಎಂದರು.
ಹಿಂದೂ ಸಮಾಜವು ಎಲ್ಲ ಸವಾಲುಗಳನ್ನು ಎದುರಿಸಿ ಜಯಿಸುವ ಮೃತ್ಯುಂಜಯ ಸಮಾಜವಾಗಿದ್ದು, ಇಲ್ಲಿ ಧರ್ಮಾಚರಣೆಯ ಜೊತೆಗೆ ಸಂವಿಧಾನದ ಪಾಲನೆಯೂ ಮುಖ್ಯವಾಗಿದೆ. ನಮ್ಮದು ಪುರುಷ ಅಥವಾ ಮಹಿಳಾ ಪ್ರಧಾನ ಸಮಾಜವಲ್ಲ. ಬದಲಾಗಿ ಮಾತೃ ಪ್ರಧಾನ ಸಮಾಜವಾಗಿದೆ ಎಂದು ಹೇಳಿದರು.ಸ್ನೇಹ ಶಕ್ತಿ ಸಂಜೀವಿನಿ ಸ್ತ್ರೀ ಶಕ್ತಿ ಸಂಘ ಒಕ್ಕೂಟದ ಅಧ್ಯಕ್ಷೆ ರೇಖಾ ಗೊರೆ, ಸಂಚಾಲಕ ವಿಶ್ವನಾಥ ಬುಗಡಿಮನೆ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಅನಂತ ಹುಳಗೋಳ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಂಡಳ ವ್ಯಾಪ್ತಿಯ ವಿವಿಧ ಸಮುದಾಯಗಳ ಪ್ರಮುಖರನ್ನು ಗೌರವಿಸಲಾಯಿತು.