ಆಗ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ನಿಮ್ಮ ಹೆಸರು ಏನಾಗಲ್ಲ ಬಿಡಿ‌. ನಿಮ್ಮನ್ನು ಯಾರು ತರಾಟೆಗೆ ತೆಗೆದುಕೊಳ್ಳಲು ಸಾಧ್ಯ? ಈಗ ಇದೂ ಪ್ರಚಾರ ಆಗುತ್ತೆ ಬಿಡಿ ಎಂದು ನುಡಿದರು. ಈ ಮಾತು ಕೇಳಿ ಕೋರ್ಟ್ ಹಾಲಲ್ಲಿ ನೆರೆದವರೆಲ್ಲ ಜೋರಾಗಿ ನಕ್ಕರು.

ಕೆಲ ಸಾರಿ ಸುದ್ದಿಯ ಹೆಡ್ಡಿಂಗ್‌ ನೆಗೆಟಿವ್ ಇರುತ್ತದೆ, ಆದರೆ ಸುದ್ದಿಯ ವಿವರಗಳು ಪಾಸಿಟಿವ್‌ ಆಗಿರುತ್ತದೆ. ಹೆಡ್ಡಿಂಗ್‌ ನೆಗೆಟಿವ್‌ ಇದ್ದಾಗ ಅದರ ಪ್ರಚಾರ ತುಸು ಜೋರಾಗಿಯೇ ಇರುತ್ತದೆ. ಇಂಥ ‘ನೆಗೆಟಿವ್‌’ ಪ್ರಚಾರದ ಸ್ವಾರಸ್ಯಕರ ಪ್ರಸಂಗಗಳು ಹೈಕೋರ್ಟ್‌ ಕಲಾಪಗಳು ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲು ಆರಂಭಿಸಿದ ಬಳಿಕ ಹೆಚ್ಚಾಗಿದೆ ಅಷ್ಟೇ.

ಇಂಥ ‘ನೆಗೆಟಿವ್‌ ಪ್ರಚಾರ’ದಿಂದ ತಮಗೆ ನೋವಾಗಿದೆ ಎಂದು ನ್ಯಾಯಮೂರ್ತಿಗಳ ಮುಂದೆ ವಕೀಲರೊಬ್ಬರು ಅಳಲು ತೋಡಿಕೊಂಡಾಗ, ಜಡ್ಜ್‌ ಸಾಹೇಬರು ಏನು ತಾನೇ ಮಾಡಲು ಸಾಧ್ಯ? ನಿಮ್ಮ ಹೆಸರಿಗೆ ಏನೂ ಆಗಲ್ಲ ಬಿಡಿ ಎಂದು ಸಮಾಧಾನಪಡಿಸಿದ ಸ್ವಾರಸ್ಯಕರ ಪ್ರಸಂಗ ಇತ್ತೀಚೆಗೆ ನಮ್ಮ ಹೈಕೋರ್ಟ್‌ನಲ್ಲಿ ನಡೆಯಿತು.

ಮಹಿಳೆಯೊಬ್ಬರು ಪತಿ ವಿರುದ್ಧ 10 ಕೇಸ್ ದಾಖಲಿಸಿದ್ದರು‌. ಪ್ರಕರಣದಲ್ಲಿ ಪತಿಯ ಪರ ವಿಚಾರಣೆಗೆ ಹಾಜರಾದ ವಕೀಲರೊಬ್ಬರು, ಸ್ವಾಮೀ ಈ ಹಿಂದೆ ನಾನು ನಕಲಿ ಅಂಕಪಟ್ಟಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ನಿಮ್ಮ ಮುಂದೆ ಹಾಜರಾಗಿದ್ದೆ. ಆಗ ಕಲಾಪದ ದೃಶ್ಯಗಳು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದೆ. ಆ ದೃಶ್ಯಗಳನ್ನು ತೆಗೆದುಕೊಂಡು ‘ವಕೀಲರನ್ನು ತರಾಟೆಗೆ ತಗೆದುಕೊಂಡ ಜಡ್ಜ್’ ಎಂದು ಹೆಡ್ ಲೈನ್‌ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ. ನನ್ನ ಹೆಸರಿನಲ್ಲಿ ನೆಗೆಟಿವ್ ಪಬ್ಲಿಸಿಟಿ ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು.

ಆಗ ನ್ಯಾಯಮೂರ್ತಿಗಳು..ಓ... ಹಾಗಾ? ಈಗ ಏನು ಮಾಡೋಣ? ಯೂಟ್ಯೂಬ್ ಲೈವ್ ಆಫ್ ಮಾಡಿಸೋಣವೇ ಎಂದು ಕೇಳಿದರು.

ಅದಕ್ಕೆ ವಕೀಲರು... ಕಲಾಪ ನೇರ ಪ್ರಸಾರದ ದೃಶ್ಯಗಳನ್ನು ತೆಗೆದುಕೊಂಡು ನೆಗೆಟಿವ್‌ ಪಬ್ಲಿಸಿಟಿ ಮಾಡಲಾಗುತ್ತಿದೆ. ಪ್ರಕರಣದಲ್ಲಿ ನನ್ನ ಕಕ್ಷಿದಾರನ ವಿರುದ್ಧ ಕೇಸಿಗೆ ತಡೆಯಾಜ್ಞೆ ನೀಡಿತು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ‘ನ್ಯಾಯಮೂರ್ತಿ ತರಾಟೆ/ಕ್ಲಾಸ್ ತೆಗೆದುಕೊಂಡರು’ ಎಂದು ಬರೆದು ಪ್ರಸಾರ ಮಾಡಲಾಗಿದೆ. ಆ ಮೂಲಕ ಮಿಸ್ ಲೀಡ್‌ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಗ ನ್ಯಾಯಮೂರ್ತಿಗಳು, ಅದಕ್ಕೆ ಏನು ಮಾಡೋಣ ಹೇಳಿ ಎಂದು ಪುನಃ ಕೇಳಿದರು. ವಕೀಲರು, ದಯನೀಯ ಧ್ವನಿಯಲ್ಲಿ ಏನು ಮಾಡಲು ಆಗುತ್ತೆ ಸ್ವಾಮಿ... ನನ್ನ ಹೆಸರಿನಲ್ಲಿ ನೆಗೆಟಿವ್ ಪ್ರಚಾರ ಆಗುತ್ತಿರುವುದರಿಂದ ನಿಮ್ಮ ಗಮನಕ್ಕೆ ತಂದೆ‌ ಅಷ್ಟೇ.

ಆಗ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ನಿಮ್ಮ ಹೆಸರು ಏನಾಗಲ್ಲ ಬಿಡಿ‌. ನಿಮ್ಮನ್ನು ಯಾರು ತರಾಟೆಗೆ ತೆಗೆದುಕೊಳ್ಳಲು ಸಾಧ್ಯ? ಈಗ ಇದೂ ಸಹ ಪ್ರಚಾರ ಆಗುತ್ತೆ ಬಿಡಿ ಎಂದು ನುಡಿದರು. ಈ ಮಾತು ಕೇಳಿ ಕೋರ್ಟ್ ಹಾಲಲ್ಲಿ ನೆರೆದವರೆಲ್ಲ ಜೋರಾಗಿ ನಕ್ಕರು.

ಎಷ್ಟೇ ಕೆಲ್ಸ ಮಾಡಿದ್ರೂ ಶಹಬ್ಬಾಸ್‌ಗಿರಿ ಸಿಗೋದು ಕಷ್ಟ...

ವಿಷಯ ಯಾವುದೇ ಇರಲಿ, ಅದರ ಆಳ, ಅಗಲ, ಉದ್ದ ಎಲ್ಲವನ್ನೂ ಅಳೆದು ಸುರಿದು ಅರಳು ಹುರಿದಂತೆ ಮಾತನಾಡ್ತಾ ಕ್ಷಣಾರ್ಧದಲ್ಲೇ ಸ್ಪಂದಿಸುವ ಗೃಹ ಮಂತ್ರಿ ಪ್ರಿಯಾಂಕ್‌ ಖರ್ಗೆ ಈಚೆಗೆ ತವರು ಜಿಲ್ಲೆ ಕಲಬುರಗಿಗೆ ಬಂದಾಗ ಅದೆಷ್ಟೇ ಕೆಲ್ಸಾ ಮಾಡಿದ್ರೂ ಶಹಬ್ಬಾಸ್‌ಗಿರಿ ಸಿಗೋದು ವಿರಳ ಅಂತ ಬೇಸರಿಸಿದ್ರು...

ಇತ್ತೀಚೆಗೆ ತವರು ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ‘ಹಿಂದ ಆರ್‌ಡಿಪಿಆರ್‌ ಮಿನಿಸ್ಟರ್‌ ಆಗಿದ್ಗಾಗ ಕೆಲ್ಸ ಮಾಡೀನಿ, ಈಗ್ಲೂ ಹೋಮ್‌ ಮಿನಿಸ್ಟರ್‌ ಆಗಿ ಕೆಲ್ಸ ಮಾಡ್ತೀದ್ದೀನಿ. ಹಿಂಗಿದ್ರೂ ಶಹಬ್ಬಾಸ್‌ಗಿರಿ ಸಿಗೋದು ತುಸು ಕಷ್ಟ ಅಂದ್ರು.

ಸುದ್ದಿಗೋಷ್ಠಿಯಲ್ಲಿ ಗೃಹ ಇಲಾಖೆಯಿಂದ ಆರಂಭವಾಗಿ ಎಲ್ಲಾ ಇಲಾಖೆಗಳ ಬಗ್ಗೆ ಬಾಣ ರೂಪದಲ್ಲಿ ಪತ್ರಕರ್ತರ ಪ್ರಶ್ನೆಗಳು ಎದುರಾದಾಗ ಪ್ರಿಯಾಂಕ್‌ ಖರ್ಗೆ ಅವೆಲ್ಲದಕ್ಕೂ ಉತ್ತರಿಸೋದ್ರಾಗೇ ಸುಸ್ತಾಗಿ ಹೋಗಿದ್ದರು. ಬಳಿಕ ಅದೆಷ್ಟೇ ಕೆಲ್ಸಾ ಮಾಡಿದ್ರೂ ನಿಮ್ಮಿಂದ (ಪತ್ರಕರ್ತರು) ಶಹಬ್ಬಾಸ್‌ಗಿರಿ ಸಿಗೋದು ವಿರಳ ಬಿಡ್ರಿ ಅಂದಾಗ ಸುದ್ದಿಗೋಷ್ಠಿಯಲ್ಲಿ ನಗುವಿನ ಅಲೆ ಮೂಡಿತು.

-ವೆಂಕಟೇಶ್‌ ಕಲಿಪಿ

-ಶೇಷಮೂರ್ತಿ ಅವಧಾನಿ