- ತುಂಗಭದ್ರಾ ಬಡಾವಣೆ ಹೊಸ ಕಟ್ಟಡವನ್ನು ಸಂಚಾರ ಪೀಠಕ್ಕೆ ಕಾಯ್ದಿರಿಸಲು ಮನವಿ । - ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಹೊಸಮನಿ ಅವರಿಗೆ ವಕೀಲರ ಸಂಘದ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ಈಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿ, ನಗರದ ಹೊರವಲಯದ ಬೈಪಾಸ್ ರಸ್ತೆಯ ಪಕ್ಕದ ತುಂಗಭದ್ರಾ ಬಡಾವಣೆಯಲ್ಲಿ ಹೊಸದಾಗಿ ನಿರ್ಮಿಸಿದ ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್‌ನ ನ್ಯಾಯಾಲಯದ ಸಂಚಾರ ಪೀಠಕ್ಕಾಗಿ ಕಾಯ್ದಿರಿಸುವಂತೆ ಹೈಕೋರ್ಟ್‌ನ ನ್ಯಾಯಮೂರ್ತಿ, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿಗೆ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಜಿಲ್ಲಾ ವಕೀಲರ ಸಂಘ ಹಾಗೂ ಹಿರಿಯ ವಕೀಲರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.ವಕೀಲರ ಸಂಘದ ಪದಾಧಿಕಾರಿಗಳು ಮಾತನಾಡಿ, ಜಿಲ್ಲೆಯ ಕಕ್ಷಿದಾರರು, ವಕೀಲರ ಹಿತದೃಷ್ಟಿಯಿಂದ ಸಂಘದ ಮನವಿಗೆ ಸ್ಪಂದಿಸಬೇಕು. ನಾಡಿನ ಕೇಂದ್ರ ಬಿಂದುವಾದ ದಾವಣಗೆರೆ ಎರಡನೇ ರಾಜಧಾನಿಯಾಗುವ ಎಲ್ಲ ಅರ್ಹತೆ ಹೊಂದಿದೆ. ಜಿಲ್ಲೆಗೆ ಹೊಂದಿಕೊಂಡಂತೆ ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವಕೀಲರು, ಕಕ್ಷಿದಾರರಿಗೂ ಅನುಕೂಲವಾಗುತ್ತದೆ. ಹಾಗಾಗಿ, ತುಂಗಭದ್ರಾ ಬಡಾವಣೆಯಲ್ಲಿ ಜಿಲ್ಲಾ ನ್ಯಾಯಾಲಯಗಳ ಕಟ್ಟಡ ನಿರ್ಮಾಣವಾಗುತ್ತಿದ್ದು, ಆ ಕಟ್ಟಡವು ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸಲು ಪೂರಕವಾಗಿದೆ ಎಂದರು.
ಈಗ ನಿರ್ಮಾಣ ಆಗುತ್ತಿರುವ ನ್ಯಾಯಾಲಯಗಳ ಸಂಕೀರ್ಣವು ಏಷಿಯನ್ ಹೆದ್ದಾರಿಗೆ ಹೊಂದಿಕೊಂಡಂತಿದೆ. ಸಮೀಪದಲ್ಲೇ ರಾಜ್ಯ ಹೆದ್ದಾರಿಯೂ ಇದೆ. ಬೆಂಗಳೂರು- ಧಾರವಾಡ ಹೈಕೋರ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು, ವಕೀಲರು, ಕಕ್ಷಿದಾರರಿಗೆ ಪ್ರಯಾಣಕ್ಕೂ ಸೂಕ್ತವಿದೆ. ಸಂಚಾರ ಪೀಠ ಇಲ್ಲಿ ಸ್ಥಾಪಿಸುವುದರಿಂದ ಹೈಕೋರ್ಟ್ ಕಾರ್ಯಭಾರದ ಒತ್ತಡ ಕಡಿಮೆಯಾಗಲಿದೆ. ನಿರ್ಮಾಣ ಹಂತದ ಹೊಸ ನ್ಯಾಯಾಲಯ ಕಟ್ಟಡ ದಾವಣಗೆರೆ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯ ಚನ್ನಗಿರಿ, ಜಗಳೂರು, ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲೂಕುಗಳಿಂದ ಬರುವಂತಹ ಕಕ್ಷಿದಾರರು ಮತ್ತು ವಕೀಲರಿಗೆ ಬಹುದೂರವಾಗುತ್ತದೆ ಎಂದು ವಿವರಿಸಿದರು.
ಇಲ್ಲನ ಬಸ್ ನಿಲ್ದಾಣದಿಂದ ತುಂಗಭದ್ರಾ ಬಡಾವಣೆಯ ನ್ಯಾಯಾಲಯಕ್ಕೆ ಹೋಗಲು ಸುಮಾರು 10-12 ಕಿಮೀ ದೂರ ಹೋಗಿ, ತಲುಪಲು ತುಂಬಾ ವೆಚ್ಚ ಮತ್ತು ಸಮಯದ ತೊಂದರೆ ಆಗುತ್ತದೆ. ಇದರಿಂದ ಶೀಘ್ರ ನ್ಯಾಯ ವಿತರಣೆಗೆ ದೊಡ್ಡ ಪೆಟ್ಟು ಬೀಳಲಿದೆ. ವಸತಿ ಪ್ರದೇಶದಿಂದ ದೂರವಿದ್ದು, ಅಲ್ಲಿಗೆ ಕಕ್ಷಿದಾರರಿಗೆ, ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಿಶೇಷಚೇತನರು, ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ರಕ್ಷಣೆ ದೃಷ್ಟಿಯಿಂದ ತುಂಬಾ ತೊಂದರೆಯಾಗುತ್ತದೆ. ಈಗ ನಿರ್ಮಿಸುತ್ತಿರುವ ಕೋರ್ಟ್ ಸಂಕೀರ್ಣ ತಲುಪಲು ಏಶಿಯನ್ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕಾಗಿದ್ದು, ರಸ್ತೆಯ ಅಪಘಾತಗಳು ಉಂಟಾಗಿ ಜೀವಹಾನಿ ಹಾಗೂ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ
ದರು. ಈಗ ನಿರ್ಮಿಸುತ್ತಿರುವ ಕಟ್ಟಡದ ಕಾಮಗಾರಿ ಸರಿಯಾಗಿಲ್ಲವೆಂದು, ಅದರ ನೀಲಿ ನಕ್ಷೆ ಬದಲಿಸಿ, ಹೊಸ ನೀಲಿ ನಕಾಶೆಯೊಂದಿಗೆ ಕಟ್ಟಡ ಕಾಮಗಾರಿ ನಿರ್ಮಾಣ ಮಾಡುವಂತೆ ಹಿಂದೆ ನಮ್ಮ ವಕೀಲರ ಸಂಘ ಮನವಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೇ, ಕಾಮಗಾರಿ ಮುಂದುವರಿಸಲಾಗಿದೆ. ಹಿಂದೆ ಮೇಲ್ಕಂಡ ನಿವೇಶನದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ಮೊದಲೇ ಜಿಲ್ಲೆಯ ಆಗಿನ 6 ತಾಲ್ಲೂಕು ವಕೀಲರ ಸಂಘದ ಸುಮಾರು 500ಕ್ಕಿಂತ ಹೆಚ್ಚು ಜನರು ಜಿಲ್ಲಾ ನ್ಯಾಯಾಲಯದ ಕಟ್ಟಡವನ್ನು ದಾವಣಗೆರೆ ನಗರದ ಮಧ್ಯಭಾಗದ ಎಪಿಎಂಸಿ ಹತ್ತಿರ, ಹಳೇ ಪಿ.ಬಿ. ರಸ್ತೆಯ ಪಕ್ಕದಲ್ಲಿ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಟ್ಟಡ ಕಟ್ಟುವಂತೆ ಮನವಿ ಸಲ್ಲಿಸಲಾಗಿದ್ದು, ಅದನ್ನು ಸಹ ಪರಿಗಣಿಸಿರುವುದಿಲ್ಲ ಎಂದು ಅವರು ತಿಳಿಸಿದರು.ಜಿಲ್ಲೆಯ ಎಲ್ಲ ತಾಲೂಕು ಕಕ್ಷಿದಾರರನ್ನು ಪ್ರತಿನಿಧಿಸುವ ತಾಲೂಕು ವಕೀಲರ ಸಂಘಗಳ ಅಭಿಪ್ರಾಯ ಆಲಿಸದೇ, ನಿರ್ಮಿಸುತ್ತಿರುವ ಕಟ್ಟಡ ಎಲ್ಲ ದೃಷ್ಟಿಯಿಂದ ಸುವ್ಯವಸ್ಥಿತವಿದೆ ಎಂಬುದನ್ನು ದೃಢೀಕರಿಸದೇ, ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ಕಾಮಗಾರಿ ಆರಂಭಿಸಿರುತ್ತಾರೆ. ವಾಸ್ತವ ಸ್ಥಿತಿಯೆಂದರೆ ಅದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಹೊಸ ಕಟ್ಟಡಕ್ಕೆ ಈಗಿನ ಜಿಲ್ಲಾ ನ್ಯಾಯಾಲಯಗಳು ಸ್ಥಳಾಂತರಗೊಂಡಲ್ಲಿ ಹತ್ತು ಹಲವಾರು ಸಮಸ್ಯೆ ಉದ್ಭವಿಸುವ ಸಾಧ್ಯತೆ ಹೆಚ್ಚು. ಹೊಸ ಸಂಕೀರ್ಣದಲ್ಲಿ ವಕೀಲರ ಸಂಘ, ಸಭಾಭವನಕ್ಕೆ ನಕಾಶೆ ಪ್ರಕಾರ ಯಾವುದೇ ರೀತಿ ಅವಕಾಶ ಮಾಡಿಲ್ಲ. ಇದರಿಂದ ಲಕ್ಷಾಂತರ ಕಕ್ಷಿದಾರರನ್ನು ಪ್ರತಿನಿಧಿಸುವ ಸುಮಾರು 1500 ವಕೀಲರು ಸಾಮಾಜಿಕ ಕಳಕಳಿ ಮತ್ತು ಕಾನೂನು ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದಂತಾಗುತ್ತದೆ ಎಂದು ಸಂಘದ ಪ್ರತಿನಿಧಿಗಳು, ಹಿರಿಯ ವಕೀಲರು ದೂರಿದರು.
ಸಂಘದ ಪದಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜ, ಲಕ್ಕಪ್ಪ, ಬಸವರಾಜ ಉಚ್ಚಂಗಿದುರ್ಗ, ಸಂತೋಷ, ರವಿಶಂಕರ ತಿಮ್ಲಾಪುರ, ಚಂದ್ರಶೇಖರ ಸೇರಿದಂತೆ ಹಿರಿಯ-ಕಿರಿಯ ವಕೀಲರು ಇದ್ದರು.- - -
(ಬಾಕ್ಸ್)* ಹೈಕೋರ್ಟ್ ನ್ಯಾಯಾಧೀಶರಿಗೆ ನಕ್ಷೆ ಸಲ್ಲಿಕೆ ಬೈಪಾಸ್ ರಸ್ತೆಯ ಪಕ್ಕದ ತುಂಗಭದ್ರಾ ಬಡಾವಣೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ನ್ಯಾಯಾಲಯದ ಸಂಕೀರ್ಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಪೀಠಕ್ಕಾಗಿ ಕಾಯ್ದಿರಿಸಿ, ಈಗಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಪುನರ್ ಪರಿಶೀಲಿಸಬೇಕು. ಬಡ ಕಕ್ಷಿದಾರರು, ವಕೀಲರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಹಿತದೃಷ್ಟಿಯಿಂದ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಲ್ಲಿ ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ವಿತರಣೆ ಮಾಡಲು ಅನುಕೂಲ ಆಗುತ್ತದೆ ಎಂದು ದೇವರಾಜ ಅರಸ್ ಬಡಾವಣೆಯ ಈಗಿರುವ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲೇ ಪೂರ್ವಾಭಿಮುಖವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಇರುವ ಬಗ್ಗೆ ಸೆಲ್ಲರ್ ಮತ್ತು ನೆಲ ಮಹಡಿ ಕಟ್ಟಡದ ಒಂದು ನೀಲಿ ನಕಾಶೆಯನ್ನು ಸಹ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಿಗೆ ಸಂಘದಿಂದ ಸಲ್ಲಿಸಲಾಯಿತು.
- - --20ಕೆಡಿವಿಜಿ5, 6:
ದಾವಣಗೆರೆಯಲ್ಲಿ ಶನಿವಾರ ಹೈಕೋರ್ಟ್‌ನ ನ್ಯಾಯಮೂರ್ತಿ, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿಗೆ ಜಿಲ್ಲಾ ವಕೀಲರ ಸಂಘ ಹಾಗೂ ಹಿರಿಯ ವಕೀಲರ ನೇತೃತ್ವದಲ್ಲಿ ಮನವಿ ಅರ್ಪಿಸಿದರು.