ಚಿತ್ರದುರ್ಗದ ಚಳ್ಳಕೆರೆಯಲ್ಲಿ ಇಂದು ಎಚ್.ಆಂಜನೇಯ ಚಾರಿಟಬಲ್‌ ಟ್ರಸ್ಟ್ ಉದ್ಘಾಟನೆ, ಪುರಸ್ಕಾರ

KannadaprabhaNewsNetwork | Updated : Jul 20 2024, 05:57 AM IST

ಸಾರಾಂಶ

ಚಿತ್ರದುರ್ಗದ ಚಳ್ಳಕೆರೆ ರಸ್ತೆ ಎಸ್‌ಜೆ ಕಲ್ಯಾಣ ಮಂಟಪದಲ್ಲಿ ಜು.20ರಂದು ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳ ಮಾದಿಗ ಸಮುದಾಯದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ 

 ದಾವಣಗೆರೆ  :  ಚಿತ್ರದುರ್ಗದ ಚಳ್ಳಕೆರೆ ರಸ್ತೆ ಎಸ್‌ಜೆ ಕಲ್ಯಾಣ ಮಂಟಪದಲ್ಲಿ ಜು.20ರಂದು ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳ ಮಾದಿಗ ಸಮುದಾಯದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಟ್ರಸ್ಟಿ, ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4.30 ಗಂಟೆಗೆ ಸಿಎಂ ಸಿದ್ದರಾಮಯ್ಯ ಟ್ರಸ್ಟ್ ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು. ಸಚಿವ ಡಿ.ಸುಧಾಕರ್‌, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಪ ಸದಸ್ಯ ಡಿ.ಟಿ.ಶ್ರೀನಿವಾಸ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಸೇರಿ ಅನೇಕರು ಭಾಗವಹಿಸುವರು. ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ದಾವಣಗೆರೆ ಗಾಂಧಿ ನಗರದ ಅತಿ ಕಡು ಬಡತನದ ಕುಟುಂಬದಲ್ಲಿ ಜನಿಸಿ, ಪೌರ ಕಾರ್ಮಿಕರಾಗಿ, ಸಂಘಟನೆ, ಹೋರಾಟ, ಜನಪರ ನಿಲುವುಗಳಿಂದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆಲಸ ಮಾಡಿದ ಎಚ್.ಆಂಜನೇಯ ಶೋಷಿತ, ನಿಮ್ನ ವರ್ಗದ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಸದುದ್ದೇಶದಿಂದ ನಾವೆಲ್ಲಾ ಕುಟುಂಬ ವರ್ಗ ಸೇರಿ, ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಸಮಾಜಮುಖಿ ಸೇವೆಗೆ ಮುಂದಾಗಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳು:

ಮೊದಲ ಹಂತದಲ್ಲಿ ಟ್ರಸ್ಟ್‌ನಿಂದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಮಾದಿಗ ಸಮುದಾಯದ ಎಸ್ಸೆಸ್ಸೆಲ್ಸಿಯ 35, ಪಿಯುಸಿಯ 33 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅದರಲ್ಲಿ ಅತ್ಯಂತ ಕಡುಬಡವರ ಕುಟುಂಬದ 6 ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು. ಇತರರಿಗೆ ಬ್ಯಾಗ್‌, ನೋಟ್‌ ಪುಸ್ತಕ, ಪ್ರಮುಖ ಕೃತಿಗಳು, ಕಲಿಕಾ ಸಾಮಗ್ರಿ ಸೇರಿ ಅಗತ್ಯ ಪರಿಕರ ನೀಡಿ, ಶಾಲು, ಹಾರದೊಂದಿಗೆ ಸನ್ಮಾನಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮುಂದಿನ ವರ್ಷ ದಾವಣಗೆರೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಟ್ರಸ್ಟ್‌ನಿಂದ ಹಮ್ಮಿಕೊಳ್ಳಲಿದೆ. ಸಮ ಸಮಾಜದ ಪರಿಕಲ್ಪನೆ ಹರಿಕಾರ ಬಸವಣ್ಣನವರ ನೇತೃತ್ವದ ವಚನ ಚಳವಳಿ, ಜಗತ್ತಿನ ಮೇರು ವಿದ್ವಾಂಸ ಡಾ. ಬಿ.ಆರ್‌. ಅಂಬೇಡ್ಕರ್‌ ಸೇರಿ ನೂರಾರು ದಾರ್ಶನಿಕರ ಏಕೈಕ ಸಂದೇಶ ಉತ್ತಮ ಶಿಕ್ಷಣವಾಗಿದೆ. ಜ್ಞಾನದಿಂದ ಮಾತ್ರ ಶೋಷಣೆ ಮುಕ್ತ ಸಮಾಜ, ಸಮಗ್ರ ಪ್ರಗತಿ ಸಾಧ್ಯವೆಂಬುದಾಗಿದೆ. ಇದೇ ಆಶಯವನ್ನು ಎಚ್.ಆಂಜನೇಯ ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸಿದವರು ಎಂದು ತಿಳಿಸಿದರು.

ಮುಖಂಡರಾದ ಬೆಳವನೂರು ಶಿವಣ್ಣ, ದುರುಗೇಶ ಗುಡಿಗೇರಿ, ಶೇಖರಪ್ಪ, ಶಿವಕುಮಾರ ಇತರರು ಇದ್ದರು.

ಬಾಕ್ಸ್‌ * ಶೈಕ್ಷಣಿಕ ಕ್ರಾಂತಿಗೆ ಆಂಜನೇಯ ಮುನ್ನುಡಿ ಸಿದ್ದರಾಮಯ್ಯ ಸಿಎಂ ಆಗಿದ್ದ 2013-18ರಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಸಚಿವರಾಗಿ ದೇಶದಲ್ಲೇ ಕ್ರಾಂತಿಕಾರಿ ಎಸ್‌ಸಿಪಿ-ಟಿಎಸ್‌ಪಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಗುಣ ಮಟ್ಟದ ಹಾಸ್ಟೆಲ್ ಸೌಲಭ್ಯ, ಹೋಬಳಿಗೊಂದು ವಸತಿ ಶಾಲೆ, ವಿದ್ಯಾಸಿರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ ಎಚ್.ಆಂಜನೇಯರ ಬದ್ಧತೆ, ಕಾಳಜಿ ಮಾದರಿಯಾಗಿದೆ. ಹಾಗಾಗಿ, ಎಚ್.ಆಂಜನೇಯರ ಆಶಯದಂತೆ ಅವರದೇ ಹೆಸರಿನ ಟ್ರಸ್ಟ್ ಸ್ಥಾಪಿಸಿ, ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಕೆ.ಎಸ್.ಬಸವಂತಪ್ಪ ಮಾಹಿತಿ ನೀಡಿದರು. 

Share this article