ಬೆಂಗಳೂರು : ಶೂ - ಚಪ್ಪಲಿ ಕದ್ದು ಚೋರ್‌ ಬಜಾರಲ್ಲಿ ಮಾರುತ್ತಿದ್ದ ಇಬ್ಬರು ಕಳ್ಳರ ಬಂಧನ

KannadaprabhaNewsNetwork |  
Published : Jul 20, 2024, 01:49 AM ISTUpdated : Jul 20, 2024, 06:00 AM IST
Vastu tips for slippers

ಸಾರಾಂಶ

ಬ್ರ್ಯಾಂಡೆಡ್‌ ಕಂಪನಿಗಳ ಶೂಗಳು-ಚಪ್ಪಲಿಗಳನ್ನು ಕದ್ದು ಚೋರ್‌ ಬಜಾರ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ನಗರದ ವಿವಿಧೆಡೆ ಮನೆಗಳು, ವಸತಿ ಸಮುಚ್ಛಯಗಳಲ್ಲಿ ಬ್ರ್ಯಾಂಡೆಡ್‌ ಕಂಪನಿಗಳ ಶೂಗಳು-ಚಪ್ಪಲಿಗಳನ್ನು ಕದ್ದು ಚೋರ್‌ ಬಜಾರ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಇಎಲ್‌ ಲೇಔಟ್‌ನ 5ನೇ ಬ್ಲಾಕ್‌ ನಿವಾಸಿಗಳಾದ ಗಂಗಾಧರ್‌ ಮತ್ತು ಯಲ್ಲಪ್ಪ ಬಂಧಿತರು. ಆರೋಪಿಗಳಿಂದ ₹10.72 ಲಕ್ಷ ಮೌಲ್ಯದ 715 ಜತೆ ಶೂಗಳು, ಎರಡು ಗ್ಯಾಸ್ ಸಿಲಿಂಡರ್‌, ಎಲೆಕ್ಟ್ರಿಕ್‌ ವಾಹನದ ಬ್ಯಾಟರಿ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಆಟೋರಿಕ್ಷಾ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬಿಇಎಲ್‌ ಲೇಔಟ್‌ ಮನೆಯೊಂದರ ಗೇಟ್‌ ಎದುರು ಇರಿಸಿದ್ದ ಎರಡು ಗ್ಯಾಸ್‌ ಸಿಲಿಂಡರ್‌ ಹಾಗೂ ನಾಲ್ಕು ಜತೆ ದುಬಾರಿ ಶೂಗಳ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರು ಕೊಡಲ್ಲವೆಂದು ಶೂ-ಚಪ್ಪಲಿ ಕಳವು:

ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿಗಳು ಕಳ್ಳತನಕ್ಕೆ ಇಳಿದಿದ್ದರು. ಚಪ್ಪಲಿ-ಶೂಗಳು ಕಳುವಾದರೆ, ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡುವುದಿಲ್ಲ ಎಂದು ಭಾವಿಸಿದ್ದರು. ಹೀಗಾಗಿ ಕಳೆದ ಏಳು ವರ್ಷಗಳಿಂದ ಹಗಲು ಮತ್ತು ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಮನೆಗಳು, ವಸತಿ ಸಮುಚ್ಛಯಗಳಲ್ಲಿ ಮನೆ ಹೊರಗೆ ಇರಿಸುವ ಬ್ರ್ಯಾಂಡೆಡ್‌ ಕಂಪನಿಗಳ ಶೂಗಳು-ಚಪ್ಪಲಿಗಳನ್ನು ಕಳವು ಮಾಡುತ್ತಿದ್ದರು.

ಪಾಲೀಶ್‌ ಮಾಡಿ ಮಾರಾಟ

ಕದ್ದ ಶೂಗಳು-ಚಪ್ಪಲಿಗಳನ್ನು ಶುಚಿಗೊಳಿಸಿ ಹಾಗೂ ಪಾಲೀಶ್‌ ಮಾಡಿ ಚೆನ್ನೈ, ಊಟಿ, ಬೆಂಗಳೂರಿನ ಚೋರ್‌ ಬಜಾರ್‌ಗಳಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು. ಆರೋಪಿಗಳು ಕೆಲವು ವೇಳೆ ಮನೆಗೆ ಹೊರಗೆ ಇರಿಸುವ ಗ್ಯಾಸ್‌ ಸಿಲಿಂಡರ್‌ಗಳು, ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್ ಮಾರಿದ್ದ ಜಮೀನು ನೋಂದಣಿ ಮಾಡಿಕೊಟ್ಟ ಸಬ್ ರಿಜಿಸ್ಟ್ರಾರ್ ಅಮಾನತು
ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ