ಭಾರೀ ಹಣಕಾಸಿನ ಅವ್ಯವಹಾರ : ನಿಗಮ, ಮಂಡಳಿಗೆ ನೀಡಿದ ಎಲ್ಲಾ ಹಣ ಸರ್ಕಾರಕ್ಕೆ ವಾಪಸ್‌!

KannadaprabhaNewsNetwork | Updated : Jul 20 2024, 05:48 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಿಗಮದಲ್ಲಿ ಭಾರೀ ಹಣಕಾಸಿನ ಅವ್ಯವಹಾರ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಇಂಥ ಹಗರಣ ನಡೆಯದಂತೆ ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ.

ಹಿಂದೆ ಹೇಗಿತ್ತು?

ಸರ್ಕಾರ ನಿಗಮ, ಮಂಡಳಿಗಳಿಗೆ ಹಣ ನೀಡುತ್ತಿತ್ತು. ಅದನ್ನು ನಿಗಮ, ಮಂಡಳಿಗಳು ತಮ್ಮ ಬ್ಯಾಂಕ್‌ ಖಾತೆಯಲ್ಲಿ ಇರಿಸಿಕೊಂಡು ಬಳಕೆ ಮಾಡುತ್ತಿದ್ದವು. ಅಲ್ಲಿನ ಹಣ ವರ್ಗಾವಣೆಗೆ ಎಂ.ಡಿ.ಗಳಿಗೆ ಅಧಿಕಾರ ಇರುತ್ತಿತ್ತು.

ಮುಂದೆ ಹೇಗೆ?

ಸರ್ಕಾರವೇ ನೇರವಾಗಿ ಖಜಾನೆಯಿಂದ ನಿಗಮ, ಮಂಡಳಿಗಳಿಗೆ ಹಣ ವರ್ಗಾವಣೆ ಮಾಡಲಿದೆ. ಆಗ ನಿಗಮ, ಮಂಡಳಿಗಳು ಬ್ಯಾಂಕ್‌ ಖಾತೆಯಲ್ಲಿ ಹಣ ಇಟ್ಟುಕೊಂಡು ಅವ್ಯವಹಾರ ನಡೆಸುವುದು ತಪ್ಪಲಿದೆ ಎಂಬುದು ಸರ್ಕಾರದ ವಾದ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಿಗಮದಲ್ಲಿ ಭಾರೀ ಹಣಕಾಸಿನ ಅವ್ಯವಹಾರ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಇಂಥ ಹಗರಣ ನಡೆಯದಂತೆ ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ. 

ಈ ನಿಟ್ಟಿನಲ್ಲಿ ವಿವಿಧ ನಿಗಮ - ಮಂಡಳಿಗಳಿಗೆ ಈಗಾಗಲೇ ಬಿಡುಗಡೆ ಮಾಡಿರುವ 2250 ಕೋಟಿ ರು. ಹಣ ಹಿಂಪಡೆದು, ಹಣ ಬಳಕೆ ಸಂಬಂಧ ಹೊಸ ಮಾರ್ಗಸೂಚಿ ರೂಪಿಸಿದ ಬಳಿಕ ಮರಳಿ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಾಲ್ಮೀಕಿ ನಿಗಮದ ಹಗರಣದಲ್ಲಿ ನಿಗಮದ ಅಧಿಕಾರಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳು ವ್ಯವಸ್ಥಿತವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಉಳಿದ ನಿಗಮ-ಮಂಡಳಿಗಳಲ್ಲಿ ಈ ರೀತಿ ಆಗದಂತೆ ಖಜಾನೆಯಿಂದಲೇ ನೇರವಾಗಿ ಹಣ ಬಿಡುಗಡೆ ಮಾಡಲು ಸ್ಪಷ್ಟ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ಹೇಳಿದರು.ಈ ಸಲುವಾಗಿ ವಾಲ್ಮೀಕಿ ನಿಗಮ ಹೊರತುಪಡಿಸಿ ಸರ್ಕಾರದಿಂದ ನಿಗಮ-ಮಂಡಳಿಗಳಿಗೆ ಬಿಡುಗಡೆಯಾಗಿರುವ ಅಷ್ಟೂ ಹಣವನ್ನು ಖಜಾನೆಗೆ ಹಿಂಪಡೆಯಲು ಸೂಚಿಸಲಾಗಿದೆ. ಈ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಲವು ಮಾರ್ಗಸೂಚಿ ಮಾಡಲಾಗುವುದು ಎಂದು ಹೇಳಿದರು.

ಹಣಕಾಸು ಇಲಾಖೆ ಪಾತ್ರ ಇಲ್ಲ:ವಾಲ್ಮೀಕಿ ಹಗರಣದಲ್ಲಿ ಹಣಕಾಸು ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಹಣಕಾಸು ಇಲಾಖೆಯು ಆಯವ್ಯಯದಲ್ಲಿ ತಿಳಿಸಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನಿಗಮಕ್ಕೆ 4 ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ಆಡಳಿತ ಇಲಾಖೆಯ ಆದೇಶದ ನಂತರ ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕರ ಕೋರಿಕೆಯಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರು ಖಜಾನೆಯಿಂದ ಹಣ ಸೆಳೆದು ನಿಗಮದ ಖಾತೆಗೆ ಜಮೆ ಮಾಡಿರುತ್ತಾರೆ. ಇದು ಇಲಾಖೆಯಲ್ಲಿ ಪ್ರತಿ ಕಂತಿನ ಹಣವನ್ನು ಸೆಳೆಯಲು ಇರುವಂತಹ ವಿಧಾನ.ಈ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಿ ವೆಚ್ಚ ಮಾಡುವುದರಿಂದ ಅವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಖಜಾನೆಗೆ ವಾಪಸು ಪಡೆದು ವ್ಯವಸ್ಥಿತ ಹಾಗೂ ಪಾರದರ್ಶಕ ಮಾರ್ಗಸೂಚಿ ರಚಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಆರ್ಥಿಕ ಇಲಾಖೆಗೆ ಮಾಹಿತಿ ಇರಲ್ಲ:ಪ್ರಸ್ತುತ ಇರುವ ಎನ್.ಟಿ.ಟಿ. ಮಾಡ್ಯೂಲ್‌ 2022ರಲ್ಲಿ ಜಾರಿ ಮಾಡಲಾಗಿದೆ. ಇದರಲ್ಲಿ ದಾಖಲಾಗಿರುವ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಆಯಾ ದಿನ ಎಷ್ಟು ಹಣ ಬ್ಯಾಲೆನ್ಸ್ ಇದೆ ಎಂದು ಮಾಹಿತಿ ಖಜಾನೆಗೆ ಲಭ್ಯವಾಗುತ್ತದೆ. ಈ ಮಾಹಿತಿ ಖಜಾನೆಯಿಂದ ಹಣ ಬಿಡುಗಡೆಗೊಳಿಸಲು ಓಪನಿಂಗ್ ಬ್ಯಾಲೆನ್ಸ್ ನಿರ್ದಿಷ್ಟಪಡಿಸಲು ನೆರವಾಗುತ್ತದೆ. ಅದರ ಆಧಾರದ ಮೇಲೆ ಹೊಸದಾಗಿ ಹಣ ಬಿಡುಗಡೆಗೊಳಿಸಲು ನಿರ್ಧಾರ ಮಾಡಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ಖಾತೆಯಲ್ಲಿರುವ ಪ್ರತಿದಿನದ ವಹಿವಾಟಿನ ಮಾಹಿತಿ ಬ್ಯಾಂಕ್‌ಗಳಿಂದ ಆರ್ಥಿಕ ಇಲಾಖೆಗೆ ಲಭ್ಯವಾಗುವುದಿಲ್ಲ. ಇದರಿಂದ ಇಂತಹ ಅವ್ಯವಹಾರಗಳು ಆರ್ಥಿಕ ಇಲಾಖೆಗೆ ಗೊತ್ತಾಗುವುದಿಲ್ಲ. ಇನ್ನು ಮುಂದೆ ಇದರಲ್ಲಿ ಪಾರದರ್ಶಕತೆ ತರಲಾಗುವುದು ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this article