ಮನೆಯೊಂದರ ಕಿಟಕಿಯಲ್ಲಿ ಇರಿಸಿದ್ದ ಕೀ ತೆಗೆದುಕೊಂಡು ಚಿನ್ನಾಭರಣ ಕಳವು ಮಾಡಿ ಬಳಿಕ ಕಿಟಕಿಯಲ್ಲೇ ಕೀ ಇರಿಸಿ ಪರಾರಿಯಾಗಿದ್ದ ಚಾಲಾಕಿ ಕಳ್ಳನನ್ನು ಚನ್ನಮ್ಮನಕೆರೆ ಅಚ್ಚುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಮನೆಯೊಂದರ ಕಿಟಕಿಯಲ್ಲಿ ಇರಿಸಿದ್ದ ಕೀ ತೆಗೆದುಕೊಂಡು ಚಿನ್ನಾಭರಣ ಕಳವು ಮಾಡಿ ಬಳಿಕ ಕಿಟಕಿಯಲ್ಲೇ ಕೀ ಇರಿಸಿ ಪರಾರಿಯಾಗಿದ್ದ ಚಾಲಾಕಿ ಕಳ್ಳನನ್ನು ಚನ್ನಮ್ಮನಕೆರೆ ಅಚ್ಚುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರದ ಚಿಕ್ಕದಾಸರಹಳ್ಳಿ ನಿವಾಸಿ ಲಕ್ಷ್ಮಣ್ ಅಲಿಯಾಸ್ ಗುನ್ನಿ(40) ಬಂಧಿತ. ಆರೋಪಿಯಿಂದ ₹8.20 ಲಕ್ಷ ಮೌಲ್ಯದ 109 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇಟ್ಟಮಡು ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಕಿಟಕಿಯಲ್ಲಿ ಇರಿಸಿ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ವಾಪಾಸ್ ಬಂದು ಮನೆಯ ಬೀಗ ತೆರೆದು ಒಳಗೆ ಬಂದಿದ್ದಾರೆ. ಬಳಿಕ ಬೀರುವಿನ ಬಾಗಿಲು ತೆರೆದುಕೊಂಡಿದ್ದರಿಂದ ಪರಿಶೀಲನೆ ಮಾಡಿದಾಗ ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಡಹಗಲೇ ಕೈ ಚಳಕ:
ಬಂಧಿತ ಆರೋಪಿ ಲಕ್ಷ್ಮಣ್ ವೃತ್ತಿಪರ ಕಳ್ಳನಾಗಿದ್ದಾನೆ. ಹಾಡಹಗಲೇ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಬಳಿಕ ಕಿಟಕಿ, ಚಪ್ಪಲಿ ಸ್ಟ್ಯಾಂಡ್, ಹೂವಿನ ಪಾಟುಗಳನ್ನು ಹುಡುಕಿ ಕೀ ಸಿಕ್ಕರೆ ಆ ಕೀ ತೆಗೆದುಕೊಂಡು ಮನೆ ಪ್ರವೇಶಿಸುತ್ತಾನೆ. ಬಳಿಕ ಚಿನ್ನಾಭರಣ ಕಳವು ಮಾಡಿ ಮತ್ತೆ ಆ ಕೀ ಇದ್ದ ಜಾಗದಲ್ಲಿ ಇರಿಸಿ ಪರಾರಿಯಾಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಪರಿಚಿತ ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಇತ್ತೀಚೆಗೆ ಆರೋಪಿಯು ಕತ್ರಿಗುಪ್ಪೆ ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಜೈಲಿಗೆ ಹೋದರೂ ಚಾಳಿ ಬಿಡದ ಕಳ್ಳ
ಆರೋಪಿಯ ಬಂಧನದಿಂದ ಗಿರಿನಗರ ಠಾಣೆಯಲ್ಲಿ ಎರಡು ಮತ್ತು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಸೇರಿ ಒಟ್ಟು ಮೂರು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯು ಈ ಹಿಂದೆಯೂ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಮಾಡಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಕಳ್ಳತನ ಚಾಳಿ ಮುಂದುವರೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.