ಸೌಲಭ್ಯಗಳ ಕೊರತೆ ನಡುವೆ ನಾಳೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

KannadaprabhaNewsNetwork |  
Published : May 24, 2026, 01:45 AM IST
23ಕೆಎಂಎನ್ ಡಿ16 | Kannada Prabha

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತೃಭೂಮಿ ಋಣ ತೀರಿಸಲು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 28 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಅಗತ್ಯ ಅನುದಾನ ನೀಡಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮೂಲ ಸೌಕರ್ಯಗಳ ಕೊರತೆ ನಡುವೆಯೂ ಪಟ್ಟಣದ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇ 25ರಂದು ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತೃಭೂಮಿ ಋಣ ತೀರಿಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 28 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಅಗತ್ಯ ಅನುದಾನ ನೀಡಿದ್ದರು.

ಅಂದಿನ ಶಾಸಕ, ಸಚಿವರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಅಗತ್ಯ ವೇಗ ನೀಡಿದ್ದರು. ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳು ಕಳೆದರೂ ಈಗಿನ ಕಾಂಗ್ರೆಸ್ ಆಸ್ಪತ್ರೆಗೆ ಅಗತ್ಯ ಚಿಕಿತ್ಸಾ ಪರಿಕರಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೀಠೋಪಕರಣಗಳ ಪೂರೈಕೆ ಮಾಡಿರಲಿಲ್ಲ. ಆದರೆ, ಸೌಲಭ್ಯ ಒದಗಿಸಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವಂತೆ ಹಾಲಿ ಶಾಸಕ ಎಚ್.ಟಿ.ಮಂಜು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆದರೂ ಸಚಿವರು ಮತ್ತು ಶಾಸಕರ ನಡುವಿನ ಸಮಯದ ಹೊಂದಾಣಿಕೆ ಕೊರತೆಯಿಂದ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮ ಎರಡು ಸಲ ಮುಂದೂಡಲ್ಪಟ್ಟಿತ್ತು.

ಮೂಲ ಸೌಕರ್ಯಗಳ ಕೊರತೆ ನಡುವೆಯೇ ಮೇ 25ರಂದು ಆಸ್ಪತ್ರೆ ಉದ್ಘಾಟನೆಗೆ ಸಮಯ ನಿಗದಿಯಾಗಿದೆ. ಆದರೆ, ಆಸ್ಪತ್ರೆಗೆ ಇನ್ನೂ ಪೂರ್ಣ ಪ್ರಮಾಣದ ವೈದ್ಯಕೀಯ ಸಿಬ್ಬಂದಿ ನೇಮಕವಾಗಿಲ್ಲ. ಒಬ್ಬರು ಅನಸ್ತೇಶಿಯಾ ತಜ್ಞರು, ಮಕ್ಕಳು ವೈದ್ಯರು ಹಾಗೂ ಪ್ರಸೂತಿ ವೈದ್ಯರ ನೇಮಕ ಮಾಡಲಾಗಿದೆ.

ಮೂವರು ವೈದ್ಯಕೀಯ ಸಿಬ್ಬಂದಿ ನೇಮಕ ಹೊರತು ಪಡಿಸಿದರೆ ತಾಯಿ ಮತ್ತು ಮಕ್ಕಳ ಅಸ್ಪತ್ರೆಗೆ ಅಗತ್ಯ ಮಹಿಳಾ ಹಾಗೂ ಪುರುಷ ಶುಶ್ರೂಷಕರ ನೇಮಕ, ಗ್ರೂಪ್ ಡಿ ಸಿಬ್ಬಂದಿ ಇಲ್ಲ. ಆರೋಗ್ಯ ಇಲಾಖೆ ಮೇಲಾಧಿಕಾರಿಗಳ ಕಣ್ಣು ತಪ್ಪಿನಿಂದ ಆಸ್ಪತ್ರಗೆ ಬರಬೇಕಾಗಿದ್ದ ಕೆಲವು ತಪಾಸಣಾ ಯಂತ್ರಗಳು, ಆರೋಗ್ಯ ಚಿಕಿತ್ಸಾ ಪರಿಕರಗಳು ಮತ್ತು ಪೀಠೋಪಕರಣಗಳು ನೆರೆಯ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ರವಾನಿಸಲಾಗಿತ್ತು.

ಕೆ.ಆರ್.ನಗರ ಆಸ್ಪತ್ರೆ ವೈದ್ಯರು ಬಳಕೆ ಮಾಡಿರುವ ಯಂತ್ರೋಪಕರಣಗಳು ಮತ್ತು ಪೀಠೋಪಕರಗಳನ್ನು ಅಲ್ಲಿಯೇ ಬಿಟ್ಟು ಉಳಿದವುಗಳನ್ನು ಕೆ.ಆರ್.ಪೇಟೆ ಆಸ್ಪತ್ರೆಗೆ ತರಲಾಗಿದೆ. ಹೀಗಾಗಿ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ತಾಯಿ ಮಕ್ಕಳ ಆಸ್ಪತ್ರೆಗೆ ಶೇ.50 ರಷ್ಟು ಚಿಕಿತ್ಸಾ ಯಂತ್ರಗಳು ಮತ್ತು ಪೀಠೋಪಕರಣಗಳ ಕೊರತೆಯಿದೆ.

ಆಸ್ಪತ್ರೆಯಲ್ಲಿ ಪರಿಕರಗಳ ಕೊರತೆ ನಡುವೆಯೇ ದಿಢೀರನೇ ಉದ್ಘಾಟನೆಗೆ ವೇದಿಕೆ ಸಜ್ಜುಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಮೇ 25ರಂದು ಮಧ್ಯಾಹ್ನ 12.30ಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.

ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಆಸ್ಪತ್ರೆ ನಿಮಾಣಕ್ಕೆ ಅಗತ್ಯ ಭೂ ದಾನ ಮಾಡಿದ್ದ ಹೊಸಹೊಳಲಿನ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರನ್ನು ತಾಯಿ ಮಗು ಆಸ್ಪತ್ರೆಗೆ ನಾಮಕರಣ ಮಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳವಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಎಚ್.ನಾಗೇಶ್ ಅಧ್ಯಕ್ಷ
ದುಡಿಯುವ ವರ್ಗ ಜಾತಿ, ಧರ್ಮ ಮೀರಿ ಒಂದಾಗಬೇಕು: ಜಿ.ಎನ್.ನಾಗರಾಜ್