ಚಿಕ್ಕಮಗಳೂರು : ಜಿಲ್ಲಾ ನ್ಯಾಯಾಲಯದಿಂದ ವರ್ಗಾವಣೆಗೊಂಡು ತೆರವಾಗಿದ್ದ ಸ್ಥಾನಗಳಿಗೆ ಸೋಮವಾರ ಆರು ಮಂದಿ ನ್ಯಾಯಾಧೀಶರು ನೂತನವಾಗಿ ಅಧಿಕಾರ ವಹಿಸಿಕೊಂಡರು.
ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾಗಿ ವಿ.ಪ್ರಕಾಶ್, ತ್ವರಿತಗತಿ ನ್ಯಾಯಾಲಯಕ್ಕೆ ಮಂಜುನಾಥ್, ಒಂದನೇ ಹೆಚ್ಚುವರಿ ಹಿರಿಯ ಶ್ರೇಣಿಗೆ ಎಸ್.ಬಿ.ದ್ಯಾವಪ್ಪ, ಎರಡನೇ ಹೆಚ್ಚುವರಿ ಹಿರಿಯ ಶ್ರೇಣಿಗೆ ಕುಲಕರ್ಣಿ ಗುರುಪ್ರಸಾದ್ ರಾಘವೇಂದ್ರ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ವಿ.ಹನುಮಂತಪ್ಪ ಹಾಗೂ ಪ್ರಧಾನ ಸಿವಿಲ್ ಮತ್ತು ಕ್ರಿಮಿನಲ್ ಕಿರಿಯ ಶ್ರೇಣಿಗೆ ಆರ್.ಮಂಜುನಾಥ್ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ಸ್ವಾಗತಿಸಲಾಯಿತು.ಬಳಿಕ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಚಿಕ್ಕಮಗಳೂರಿಗೆ ಆಗಮಿಸಿರುವ ನ್ಯಾಯಾಧೀಶರು ಮೂರು ವರ್ಷಗಳ ಕಾಲ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನ್ಯಾಯಾಧೀಶರ ಜೊತೆ ಉತ್ತಮ ಒಡನಾಟ ಹೊಂದಬೇಕು. ಹಿರಿಯ ಹಾಗೂ ಕಿರಿಯ ವಕೀಲರು ನ್ಯಾಯಾಧೀಶರ ಆಜ್ಞೆಗನುಸಾರ ಕೆಲಸ ನಿರ್ವಹಿಸಿದರೆ ತ್ವರಿತಗತಿಯಲ್ಲಿ ಪ್ರಕರಣಗಳು ಇತ್ಯರ್ಥಗೊಂಡು ಸಾರ್ವಜನಿಕರು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶುಭ ಗೌಡರ್ ಮಾತನಾಡಿ, ನ್ಯಾಯಾಧೀಶರ ವೃತ್ತಿ ಅತ್ಯಂತ ಪವಿತ್ರವಾದುದು. ನೊಂದ ಹಾಗೂ ಅಸಹಾಯಕರು ನ್ಯಾಯಾಲಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೂಲಂಕಶವಾಗಿ ಪರಿಶೀಲನೆ ನಡೆಸಿ ಸಮಗ್ರ ತೀರ್ಪು ನೀಡುವುದು ಕರ್ತವ್ಯವಾಗಬೇಕು ಎಂದು ಹೇಳಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ವಿ.ಪ್ರಕಾಶ್ ಮಾತನಾಡಿ, ಪ್ರಾರಂಭದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿ ತದ ನಂತರ ನ್ಯಾಯಾಧೀಶರ ಹುದ್ದೆ ಅಲಂಕರಿಸಿರುವ ಜೊತೆಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿರುವ ಅಪಾರ ಅನುಭವವಿದೆ. ಹೀಗಾಗಿ ವಕೀಲರು ಸಹ ಸಂಪೂರ್ಣ ಸಹಕಾರ ನೀಡಿದ್ದಲ್ಲಿ ಬಾಕಿಯಿರುವ ಪ್ರಕರಣ ವಿಲೇಗೊಳಿಸಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.