ಕನ್ನಡಪ್ರಭ ವಾರ್ತೆ ದಾಂಡೇಲಿ
ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲ ಅಶೋಕ ನಾಯ್ಕ ರೋಟರಿ ಕೇವಲ ಒಂದು ಸಂಸ್ಥೆಯಲ್ಲ, ಅದು ಸೇವೆಯ ಮನೋಭಾವ. ಶಾಶ್ವತ ಪ್ರಭಾವವನ್ನು ಬೀರಿರಿ ಎಂಬ ಘೋಷವಾಕ್ಯದಂತೆ ನಾವು ಮಾಡುವ ಪ್ರತಿಯೊಂದು ಕೆಲಸವೂ ಸಮಾಜದಲ್ಲಿ ಶಾಶ್ವತವಾದ ಪರಿಣಾಮ ಬೀರಬೇಕು. 2025-26ನೇ ಸಾಲಿನಲ್ಲಿ ದಾಂಡೇಲಿ ಕ್ಲಬ್ ಅಶುತೋಷ್ ಕುಮಾರ್ ರಾಯ್ ನೇತೃತ್ವದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದೆ. ನೂತನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಸದಸ್ಯರನ್ನು ಕ್ಲಬಿಗೆ ಸೇರ್ಪಡೆಗೊಳಿಸಿ ರೋಟರಿ ಕ್ಲಬ್‌ನ್ನು ಮತ್ತಷ್ಟು ಬಲವರ್ಧನೆಯ ಜೊತೆಗೆ ಸಾಮಾಜಿಕ ನೆರವನ್ನು ನೀಡಲು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಲೆಂದು ಶುಭ ಹಾರೈಸಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂದು ಆಶಿಸಿದರು.
ರೋಟರಿ ಸಹಾಯಕ ಪ್ರಾಂತಪಾಲ ಶಿವಾನಂದ ನಾಯ್ಕ, ದಾಂಡೇಲಿ ರೋಟರಿ ಕ್ಲಬ್ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಗುರುತಿಸಿಕೊಂಡಿದೆ. ರಕ್ತದಾನ, ವಿದ್ಯಾರ್ಥಿ ವೇತನ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಗಳಲ್ಲಿ ಕ್ಲಬ್ ಮಾಡಿರುವ ಸಾಧನೆ ಶ್ಲಾಘನೀಯ. ನೂತನ ಅಧ್ಯಕ್ಷ ಮಿಥುನ್ ನಾಯಕ ನೇತೃತ್ವದ ತಂಡವು ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಲಿ ಎಂದರು.ನಿರ್ಗಮಿತ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ನೂತನ ಅಧ್ಯಕ್ಷ ಮಿಥುನ್ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಲಾಯಿತು.