ಕನ್ನಡಪ್ರಭ ವಾರ್ತೆ ಚಾಮರಾಜನಗರ88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮೇಳ ಉದ್ಘಾಟನಾ ಸಮಾರಂಭ ಮಾ.6ರಂದು ಸಂಜೆ 5.30ಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ನಡೆಯಲಿದೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿಜೀ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ 88ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮೇಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರು ಉಪವಲಯ ಬ್ರಹ್ಮಾಕುಮಾರೀಸ್ ಮುಖ್ಯ ಸಂಚಾಲಕ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ ಅವರು ವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮಿಜೀ ನೆರವೇರಿಸಲಿದ್ದು, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಳಿಗಿರಿರಂಗನ ಬೆಟ್ಟ ವಿಶ್ವ ಶಾಂತಿನಿಕೇತನ ಆಶ್ರಮದ ಶಾಂತ ಮಲ್ಲಿಕಾರ್ಜು ನಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಧರ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಐ.ಈ. ಬಸವರಾಜು, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಬಾಲರಾಜು ಭಾಗವಹಿಸಲಿದ್ದಾರೆ. ಕೊಳ್ಳೇಗಾಲ ಬ್ರಹ್ಮಾಕುಮಾರೀಶ್ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜಿ ಶಿವ ಜಯಂತಿಯ ದಿವ್ಯ ಸಂದೇಶ ನೀಡಲಿದ್ದಾರೆ.ಮಾ. 11ರಂದು ಬೆಳಗ್ಗೆ 6.30ರಿಂದ 8ರವರಗೆ ಸಾರ್ವಜನಿಕರಿಗೆ ಸುಖ, ಶಾಂತಿ, ಆರೋಗ್ಯಕ್ಕಾಗಿ ಪ್ರವಚನ ನಡೆಯಲಿದ್ದು, ಬೆಳಗ್ಗೆ 10.30ರಿಂದ 12ರವರಗೆ ಹಿರಿಯ ನಾಗರೀಕರಿಗಾಗಿ ಭಗವಂತನ ಆಶೀರ್ವಾದವು ಅಂತಿಮದವರೆಗೆ ರಕ್ಷಾಕವಚವಾಗಿರಲು ಪ್ರವಚನ ನಡೆಯಲಿದೆ.ಸಂಜೆ 4ರಿಂದ 5.30ರವರಗೆ ಮಹಿಳೆಯರಿಗೆ ಮನೋಬಲದಿಂದ ಶಿವಶಕ್ತಿಯರಾಗಿ ಮನೆಯನ್ನು ಮಂದಿರವನ್ನಾಗಿ ಮಾಡಿಕೊಳ್ಳಲು ಪ್ರವಚನ ನಡೆಯಲಿದ್ದು, ಸಂಜೆ 6.30ರಿಂದ 8ರವರಗೆ ಸಾರ್ವಜನಿಕರಿಗಾಗಿ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯಕ್ಕಾಗಿ ಪ್ರವಚನ ನಡೆಯಲಿದೆ.