ಫೆ.16ರಂದು ಕೋಟೆ ಭೈರವೇಶ್ವರಸ್ವಾಮಿ ದೇವಾಲಯದ ರಾಜಗೋಪುರ ಸಮುದಾಯ ಭವನ ಉದ್ಘಾಟನೆ

KannadaprabhaNewsNetwork | Published : Feb 13, 2025 12:45 AM

ಸಾರಾಂಶ

ಹೊಸಹೊಳಲು ಹೊಯ್ಸಳರ ಶಿಲ್ಪಕಲೆಯ ಬೀಡಾಗಿದೆ. ಕೆ.ಆರ್.ಪೇಟೆ ತಾಲೂಕು ಸಾಂಸ್ಕೃತಿಕ ತವರು. ಇಲ್ಲಿರುವ ಕೋಟೆ ಭೈರವೇರೇಶ್ವರ ದೇವಾಲಯವನ್ನು ನೆರೆಯ ಕೆ.ಆರ್.ನಗರ ಕ್ಷೇತ್ರದ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಸಹಕಾರದಿಂದ ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣ ವ್ಯಾಪ್ತಿಯ ಹೊಸ ಹೊಳಲು ಕೋಟೆ ಭೈರವೇಶ್ವರಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸಮುದಾಯ ಭವನದ ಉದ್ಘಾಟನೆ ಹಾಗೂ 24 ವರ್ಷದ ಪರ ಕಾರ್ಯಕ್ರಮ ಫೆ.16ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ದೇವಾಲಯದ ಟ್ರಸ್ಟಿನ ಗೌರವಾಧ್ಯಕ್ಷ ಎಚ್.ಟಿ.ಮಂಜು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದ ಸಂಬಂಧ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಹೊಸಹೊಳಲು ಹೊಯ್ಸಳರ ಶಿಲ್ಪಕಲೆಯ ಬೀಡಾಗಿದೆ. ತಾಲೂಕು ಸಾಂಸ್ಕೃತಿಕ ತವರು. ಇಲ್ಲಿರುವ ಕೋಟೆ ಭೈರವೇರೇಶ್ವರ ದೇವಾಲಯವನ್ನು ನೆರೆಯ ಕೆ.ಆರ್.ನಗರ ಕ್ಷೇತ್ರದ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಸಹಕಾರದಿಂದ ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ನಾನು ಕೋಟೆ ಭೈರವೇಶ್ವರನ ಒಕ್ಕಲಿಗರಿಗೆ ಸೇರಿದ್ದು, 24 ವರ್ಷಗಳ ನಂತರ ಕೋಟೆ ಭೈರವೇಶ್ವರನ ಒಕ್ಕಲು ಮನೆತನದವರೆಲ್ಲ ಸೇರಿ ಕೋಟೆ ಭೈರವೇರೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸಮುದಾಯ ಭವನದ ಉದ್ಘಾಟನೆ ಹಾಗೂ 24 ವರ್ಷದ ಪರ ಕಾರ್ಯಕ್ರಮ ಫೆ.16 ರಂದು ನಡೆಸುತ್ತಿದ್ದೇವೆ ಎಂದರು.

ಬುಧವಾರದಿಂದಲೇ ಪೂಜೆಗಳು ಆರಂಭಗೊಂಡಿವೆ. ಫೆ.16 ರಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎ.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಫೆ.17 ರಂದು ಸಂಜೆ ಗುಡ್ಡೇನಹಳ್ಳಿಯಲ್ಲಿ ದೇವಮ್ಮ ಮತ್ತು ಲಕ್ಷ್ಮೀದೇವಿ ಅಮ್ಮನವರಿಗೆ ತಂಬಿಟ್ಟಿನ ಆರತಿ ಮತ್ತು ಉತ್ಸವ, ಫೆ.18ರಂದು ಮಧ್ಯಾಹ್ನ 12 ಗಂಟೆಗೆ ಕೋಟೆ ಭೈರವೇಶ್ವರನ ಸನ್ನಿಧಿಯಲ್ಲಿ ಪರ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ ಹೊಸಹೊಳಲು ಮತ್ತು ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಕೊಪ್ಪಲು ಹಾಗೂ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮಸ್ಥರು ಪೂಜಾಧಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ತಿಳಿಸಿದರು.

ತಾಲೂಕಿನ ಸರ್ವ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ನಡೆಸಲಾಗುವುದು. ತಾಲೂಕಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು. ಈ ವೇಳೆ ಕೋಟೆ ಭೈರವೇರೇಶ್ವರ ದೇವಾಲಯದ ಟ್ರಸ್ಟಿನ ಅಧ್ಯಕ್ಷೆ ಮಂಜುಳಾ ಚನ್ನಕೇಶವ ಇದ್ದರು.

Share this article