ಕನ್ನಡಪ್ರಭ ವಾರ್ತೆ ಮಡಿಕೇರಿ
ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಮತ್ತು ಕೊಡವ ಹಾಕಿ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಕ್ರೀಡಾಜ್ಯೋತಿಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕೊಡಗಿನ ಜನತೆಯ ಪ್ರಮುಖ ಕಾರ್ಯಚಟುವಟಿಕೆಗಳಲ್ಲಿ ಕ್ರೀಡೆಯೂ ಒಂದಾಗಿದ್ದು, ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಮುದ್ದಂಡ ಹಾಕಿ ಉತ್ಸವ ಅತ್ಯಂತ ಯಶಸ್ಸು ಕಂಡು ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.ಹಾಕಿ ಕ್ರೀಡಾಕೂಟದಲ್ಲಿ ಒಂದು ವಿಭಿನ್ನ ರೀತಿಯ ಪ್ರಯೋಗವನ್ನು ಮಾಡುತ್ತಿರುವ ಮುದ್ದಂಡ ಹಾಕಿ ಉತ್ಸವದ ಆಯೋಜಕರ ಪ್ರಯತ್ನ ಶ್ಲಾಘನೀಯ. ಮುಂದಿನ ತಿಂಗಳಾಂತ್ಯದವರೆಗೆ ನಡೆಯುವ ಹಾಕಿ ಉತ್ಸವವು, ನಾಡಿನ ಯುವ ಹಾಕಿಪಟುಗಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಲಿ ಎಂದರು.
ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಉಪಾಧ್ಯಕ್ಷ ಡೀನ್ ಬೋಪಣ್ಣ, ಕಾರ್ಯದರ್ಶಿ ಆದ್ಯ ಪೂವಣ್ಣ, ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ, ಪಟ್ಟೆದಾರ ಡಾಲಿ ತಿಮ್ಮಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಪ್ರಮುಖರಾದ ಪಾಂಡಂಡ ಮೊಣ್ಣಪ್ಪ, ಮುದ್ದಂಡ ತಿಮ್ಮಯ್ಯ, ಮುದ್ದಂಡ ಕುಟುಂಬಸ್ಥರು ಹಾಗೂ ಪಾಂಡಂಡ ಕುಟುಂಬಸ್ಥರು ಉಪಸ್ಥಿತರಿದ್ದರು.
ಐನ್ ಮನೆಗಳಿಗೆ ಮ್ಯಾರಥಾನ್ : 1997ರಿಂದ ಇಲ್ಲಿಯವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ಮಾ.28ರಂದು ಬೆಳಿಗ್ಗೆ 9ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿ ಸಾಗಲಿದೆ.