ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನಾ ಸಮಾರಂಭದಲ್ಲಿ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಅವರಿಗೆ ವಿಶೇಷ ಆಹ್ವಾನ ನೀಡಲಾಗುತ್ತಿದೆ. ಅಂದು ಸನ್ಮಾನ ಕೂಡ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
1992ರ ಡಿಸೆಂಬರ್ 5ರಂದು ಗಲಭೆ ನಡೆದಿತ್ತು. ಆಗ ಅಡಕೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿತ್ತು. ಅದರ ಆರೋಪಿಗಳ ಪೈಕಿ ಶ್ರೀಕಾಂತ ಪೂಜಾರಿ ಮೂರನೆಯವರಾಗಿದ್ದರು. ಈ ಕೇಸ್ ಎಲ್‌ಪಿಆರ್ (ಲಾಂಗ್ ಪೆಂಡಿಂಗ್ ರೆಜಿಸ್ಟರ್ ಕೇಸ್) ಆಗಿದೆ ಎಂದು ಪೊಲೀಸರು ಡಿ. 29ರಂದು ಬಂಧಿಸಿದ್ದರು. ಇದು ದೇಶದಲ್ಲೇ ಭಾರೀ ಸಂಚಲನವನ್ನುಂಟು ಮಾಡಿತ್ತು.
ರಾಮಮಂದಿರ ಉದ್ಘಾಟನೆಯ ವೇಳೆಯೇ ಬಂಧನ ಮಾಡಿರುವುದು ಹಿಂದೂ ವಿರೋಧಿ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳೆಲ್ಲ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದವು. ''''ನಾನು ಕರಸೇವಕ ನನ್ನನ್ನೂ ಬಂಧಿಸಿ'''' ಎಂದು ಪ್ರತಿಭಟನಾ ಅಭಿಯಾನ ಶುರು ಮಾಡಿದ್ದರು.
ಇನ್ನು ಹುಬ್ಬಳ್ಳಿಯಲ್ಲಿ ರಾಮಭಕ್ತನ ಬಂಧನ ಖಂಡಿಸಿ ಅಯೋಧ್ಯೆಯಲ್ಲೂ ಪ್ರತಿಭಟನೆ ನಡೆದಿತ್ತು. ರಾಷ್ಟ್ರಮಟ್ಟದಲ್ಲೇ ಸಂಚಲನವನ್ನುಂಟು ಮಾಡಿತು. ಬಂಧನವಾಗಿ 9 ದಿನದ ಬಳಿಕ ಶ್ರೀಕಾಂತ್ ಪೂಜಾರಿ ಅವರಿಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆ ಆಗಿದ್ದರು.
ವಿಶೇಷ ಆಹ್ವಾನ:
ಇದೀಗ ದೇಶಾದ್ಯಂತ ಸದ್ದು ಮಾಡಿರುವ ರಾಮನಭಕ್ತನ ಬಿಡುಗಡೆಯಾಗಿರುವುದು ಹಿಂದೂಪರ ಸಂಘಟನೆಗಳಲ್ಲಿ ಸಂತಸವನ್ನುಂಟು ಮಾಡಿದೆ. ಬಿಡುಗಡೆಯಾದ ಬಳಿಕ ಶ್ರೀಕಾಂತ್ ಪೂಜಾರಿ ಕೂಡ ರಾಮನಭಕ್ತ, ಬಜರಂಗ ದಳದ ಕಾರ್ಯಕರ್ತ ಎಂಬ ಕಾರಣಕ್ಕೆ ಬಂಧಿಸಿದ್ದರು. ಮತ್ತೆ ನಾನು ರಾಮನ ಸೇವೆಗೆ ಸದಾ ಸಿದ್ಧ. ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ತಿಳಿಸಿದ್ದಾರೆ. ಹೀಗಾಗಿ, ಅವರೇ ಹೋಗುವ ಬದಲು ನಾವೇ ಕರೆದುಕೊಂಡು ಹೋಗುವುದು ಉತ್ತಮ. ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಮುಖಂಡರದ್ದು.
ಹೀಗಾಗಿ, ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕೆ ಶ್ರೀಕಾಂತ ಪೂಜಾರಿ ಹಾಗೂ ಅವರ ಕುಟುಂಬಕ್ಕೆ ವಿಶೇಷ ಆಹ್ವಾನ ಪತ್ರಿಕೆ ನೀಡಬೇಕು. ಜತೆಗೆ ಅಂದಿನ ಕಾರ್ಯಕ್ರಮದಲ್ಲಿ ಶ್ರೀಕಾಂತ ಪೂಜಾರಿ ಅವರನ್ನು ಕರೆದುಕೊಂಡು ಹೋಗಿ, ಪ್ರಧಾನ ಮಂತ್ರಿಯವರಿಂದ ಸನ್ಮಾನ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಲ್ಲಿ ಸೋಮವಾರ ನಡೆಯಲಿರುವ ಬಿಜೆಪಿ ನಾಯಕರ ಚಿಂತನ-ಮಂಥನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅಲ್ಲಿಂದ ಒಕೆ ಅಂದರೆ ಇಲ್ಲಿ ಇನ್ನೆರಡ್ಮೂರು ದಿನಗಳಲ್ಲಿ ಬಿಜೆಪಿಯ ಹಿರಿಯ ನಾಯಕರೇ ಆಹ್ವಾನ ಪತ್ರಿಕೆಯನ್ನು ಮುಟ್ಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಬಿಜೆಪಿ ಮುಖಂಡರೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ, ಅಯೋಧ್ಯೆ ಉದ್ಘಾಟನೆಗೆ ಶ್ರೀಕಾಂತ ಪೂಜಾರಿ ಅವರನ್ನು ಕರೆದುಕೊಂಡು ಹೋಗಬೇಕೆಂಬ ಇರಾದೆ ಇದೆ. ಈ ಬಗ್ಗೆ ಹಿರಿಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೂ ಏನಾಗುತ್ತದೆಯೋ ನೋಡಬೇಕು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಶ್ರೀಕಾಂತ ಪೂಜಾರಿ ಅವರಿಗೆ ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಉದ್ಘಾಟನೆಗೆ ವಿಶೇಷ ಆಹ್ವಾನ ಸಿಗುವುದು ಖಚಿತ ಎಂಬುದು ಉನ್ನತ ಮೂಲಗಳ ಅಂಬೋಣ. ಏನಾಗುತ್ತದೆಯೋ ಕಾಯ್ದು ನೋಡಬೇಕಷ್ಟೇ!