ಮಗುವಿನ ಸಂಶೋಧನಾತ್ಮಕ ಗುಣ ಪ್ರೇರೇಪಿಸಿ

KannadaprabhaNewsNetwork | Published : Dec 4, 2024 12:30 AM

ಸಾರಾಂಶ

ನಮ್ಮಲ್ಲಿರುವ ಪಂಚೇಂದ್ರಿಯ ಹಾಗೂ ಕರ್ಮೇಂದ್ರಿಯಗಳು ಮನುಷ್ಯನಲ್ಲಿರುವ ಅಸಲಿ ಬುದ್ಧಿಮತ್ತೆ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಗುವಿನಲ್ಲಿ ಸಂಶೋಧನಾತ್ಮಕ ಗುಣ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕು. ನೈಜ ಬುದ್ಧಿಮತ್ತೆಗೆ ಉತ್ತೇಜನ ನೀಡುವುದರಿಂದ ಇದು ಸಾಧ್ಯವಾಗುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಹಾಡೂ ಪದ್ಮಶ್ರೀ ಪುರಸ್ಕೃತ ಡಾ.ಎ.ಎಸ್. ಕಿರಣ್ಕುಮಾರ್ ತಿಳಿಸಿದರು.

ದಟ್ಟಗಳ್ಳಿಯ ನೈಪುಣ್ಯ ಶಾಲೆಯಲ್ಲಿ ಮಂಗಳವಾರ ನೈಪುಣ್ಯ ಸ್ಪೇಸ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿರುವ ಪಂಚೇಂದ್ರಿಯ ಹಾಗೂ ಕರ್ಮೇಂದ್ರಿಯಗಳು ಮನುಷ್ಯನಲ್ಲಿರುವ ಅಸಲಿ ಬುದ್ಧಿಮತ್ತೆ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ. ನಾವು ಕಾಣುವ ಕನಸೇ ನಮ್ಮ ಬುದ್ಧಿಮತ್ತೆಗೆ ಒಂದು ನಿದರ್ಶನ. ಯಾವುದೇ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ತಮ್ಮನ್ನು ತಾವು ಅರಿಯುವ ಶಿಕ್ಷಣ ನೀಡಬೇಕು. ಅಲ್ಲದೇ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಅವರ ಅರಿವಿಗೆ ಬರುವಂತೆ ಮಾಡಬೇಕು ಎಂದರು.

ನಮ್ಮ ಮನಸ್ಸು ಬೇರೆಯವರನ್ನು ಕೇಳುವ ಪ್ರಶ್ನೆಗೆ ಉತ್ತರ ಸಿಗದಿದ್ದಾಗ ತಾನೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಆಗ ಮಕ್ಕಳಲ್ಲಿನ ಸಂಶೋಧನಾತ್ಮಕ ಗುಣ ಬೆಳವಣಿಗೆ ಹೊಂದುತ್ತದೆ. ಅದನ್ನು ಪೋಷಿಸಬೇಕು. ಅದು ಬಿಟ್ಟು ಕೃತಕ ಬುದ್ಧಿಮತ್ತೆಯನ್ನು ಹೇರಲು ಹೋದರೆ ನೈತ ಬುದ್ಧಿಮತ್ತೆಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಮನುಷ್ಯನಲ್ಲಿ ಒಬ್ಬ ವಿಜ್ಞಾನಿ ಇರುತ್ತಾನೆ. ತಾನು ನೋಡಿದ್ದನ್ನು ತಾನು ನಿರ್ಮಾಣ ಮಾಡಬೇಕು ಎಂಬ ಭಾವನೆ ಆತನಲ್ಲಿರುವ ಆವಿಷ್ಕಾರ ಮನೋಭಾವ ಹೆಚ್ಚಿಸುತ್ತದೆ. ಹಾಗೆಯೇ ಸಾಧನೆ ಮಾಡಿದವರನ್ನು ಗಮನಿಸಿದರೆ ಎಲ್ಲಾ ವ್ಯಕ್ತಿಯಲ್ಲಿಯೂ ಅಡಗಿರುವ ಪ್ರತಿಭೆ ತಿಳಿಯುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಅಗಾದವಾದ ಪ್ರತಿಭೆ ಹೊರತರಲು ಸಾಧ್ಯ ಎಂದು ಅವರು ತಿಳಿಸಿದರು.

ಮಕ್ಕಳಿಗೆ ಕೃತಕ ಬುದ್ದಿಮತ್ತೆ ಹೇರಲು ಹೋಗಿ ನೈಜ ಬುದ್ಧಿಮತ್ತೆ ನಿಷ್ಕ್ರಿಯವಾಗಬಾರದು. ಮಕ್ಕಳಿಗೆ ಕೃತಕ ಬುದ್ದಿಮತ್ತೆ ಬಗ್ಗೆ ಕಲಿಸಬೇಕು. ಆದರೆ ಅದನ್ನು ಕಲಿಸುವ ಭರದಲ್ಲಿ ಅವರಲ್ಲಿನ ನೈಜ ಬುದ್ದಿಮತ್ತೆ ಬೆಳವಣಿಗೆಗೆ ಅವಕಾಶವಿಲ್ಲದ ಸನ್ನಿವೇಶ ಸೃಷ್ಟಿಸಬಾರದು ಎಂದು ಅವರು ಹೇಳಿದರು.

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಕಿರಣ್ ಕುಮಾರ್ ಅವರು ಕನ್ನಡದ ವ್ಯಕ್ತಿಯಾಗಿ ಹಾಸನ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಇಸ್ರೋ ಅಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದಿರುವುದೇ ಒಂದು ದೊಡ್ಡ ಸಾಧನೆ. ಹಾಗಾಗಿ ವಿದ್ಯಾರ್ಥಿಗಳು ಅವರ ವ್ಯಕ್ತಿತ್ವವನ್ನೇ ಮಾದರಿಯಾಗಿ ಸ್ವೀಕರಿಸಿ ಸಾಧನೆ ಕಡೆಗೆ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿವಾನಂದ ಕಲ್ಕೇರಿ, ಭಾವನಾ ಶ್ರೀಕಾಂತ, ಪ್ರಾಂಶುಪಾಲೆ ಶಾಂತಿನಿ ಮೊದಲಾದವರು ಇದ್ದರು.

Share this article