ಯಾವುದೇ ಬಗೆಯ ಮೂಲಭೂತ ಸೌಕರ್ಯಗಳೇ ಇರದ ಪ್ರದೇಶದಲ್ಲಿ ಕೇವಲ ಗ್ರಾಮಸ್ಥರ ಒತ್ತಾಸೆಯಿಂದಾಗಿಯೇ ಶಿಕ್ಷಣ ಪ್ರೇಮ ಸಾಕಾರಗೊಂಡು ಅಕ್ಷರಕ್ರಾಂತಿ ಅನಾವರಣಗೊಂಡಿದೆ.
ಯಲ್ಲಾಪುರ:
ಯಾವುದೇ ಬಗೆಯ ಮೂಲಭೂತ ಸೌಕರ್ಯಗಳೇ ಇರದ ಪ್ರದೇಶದಲ್ಲಿ ಕೇವಲ ಗ್ರಾಮಸ್ಥರ ಒತ್ತಾಸೆಯಿಂದಾಗಿಯೇ ಶಿಕ್ಷಣ ಪ್ರೇಮ ಸಾಕಾರಗೊಂಡು ಅಕ್ಷರಕ್ರಾಂತಿ ಅನಾವರಣಗೊಂಡಿದೆ. ಸುಮಾರು ೧೪ ವರ್ಷಗಳ ಕನಸಾಗಿದ್ದ ಇಲ್ಲಿ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರೇರಕವಾಗಲು ಅಗತ್ಯವಿರುವ ಶಿಕ್ಷಣ ಕೇಂದ್ರವೊಂದನ್ನು ಆರಂಭಿಸಿದ್ದು, ತಾಲೂಕಿನ ಮತ್ತು ಜಿಲ್ಲೆಯ ಉಳಿದವರಿಗೆ ಮಾದರಿಯಾಗಿದೆ ಎಂದು ಬಿಇಒ ಎನ್.ಆರ್. ಹೆಗಡೆ ಹೇಳಿದರು.ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗೇರಿ ಗೌಳಿವಾಡಾದಲ್ಲಿ ಕೇವಲ ಗ್ರಾಮಸ್ಥರ ದೇಣಿಗೆಯ ನೆರವಿನಿಂದಲೇ ₹ ೬ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿ, ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು.ಈ ಪ್ರದೇಶದ ಜನರು ಬಡವರಾಗಿದ್ದರೂ, ಅವರೊಳಗಿನ ಶೈಕ್ಷಣಿಕ ದಾಹ ಅವರ್ಣನೀಯ. ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿಸಬೇಕೆಂಬ ಅವರ ತುಡಿತ ಇಂತಹ ಸಾಧನೆಗೆ ಕಾರಣವಾಗಿದ್ದು, ಅವರು ನೀಡಿದ ಪ್ರತಿಯೊಂದು ರೂಪಾಯಿಗಳ ಆರ್ಥಿಕ ನೆರವೂ ಇಲ್ಲಿನ ಮಕ್ಕಳ ಉಜ್ವಲ್ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು. ಕಾಕತಾಳೀಯವೆಂಬಂತೆ ಸರ್ಕಾರದಿಂದಲೂ ಶಾಲಾ ಕೊಠಡಿ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ದೊರೆತಿದ್ದು, ತಾಂತ್ರಿಕ ಅಡಚಣೆಗಳಿಂದಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಪ್ರಸ್ತುತ ಊರಿನವರ ಉದಾರ ನೆರವಿನಿಂದ ಇಲ್ಲಿ ಶಾಲಾ ಕೊಠಡಿ ಮತ್ತು ಅಡುಗೆಕೋಣೆ ನಿರ್ಮಿಸಲಾಗಿದ್ದು, ಸಮುದಾಯ ಒಮ್ಮನಸ್ಸಿನಿಂದ ಸಂಘಟಿತವಾದರೆ ಏನೆಲ್ಲವನ್ನೂ ಸಾಧಿಸಬಹುದೆಂಬುದಕ್ಕೆ ಇಂದಿನ ಉದ್ಘಾಟನೆ ಸಾಕ್ಷಿಯಾಗುತ್ತದೆ. ಇಲ್ಲಿನ ಸಾರ್ವಜನಿಕರ ನಿರೀಕ್ಷೆ ಮೀರಿದ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.ಬಿಆರ್‌ಸಿ ಸಂತೋಷ ಜಿಗಳೂರು ಮಾತನಾಡಿ, ಆರ್ಥಿಕವಾಗಿ ಅತ್ಯಂತ ಕೆಳಮಟ್ಟದಲ್ಲಿರುವ ಗೌಳಿ ಸಮುದಾಯದವರ ಶಿಕ್ಷಣ ಪ್ರೇಮ ಶ್ಲಾಘನೀಯವಾಗಿದ್ದು, ಮುಂಬರುವ ದಿನಗಳಲ್ಲಿ ಈ ಶಾಲೆ ತಾಲೂಕಿನ ಉತ್ತಮ ಶಾಲೆಯೆಂದು ಖಂಡಿತ ಗುರುತಿಸಿಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಿಕ್ಷಣ ಇಲಾಖೆಯ ದಿಲೀಪ ದೊಡ್ಮನಿ, ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ನಾಯ್ಕ, ಪತ್ರಕರ್ತರಾದ ಕೇಬಲ್ ನಾಗೇಶ, ಪ್ರಭಾ ಜಯರಾಜ ಉದ್ಘಾಟನೆಗೊಂಡ ಶಾಲೆಯ ಸಾಧನೆ ಕುರಿತು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗಂಗಾರಾಮ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಸಂಗೀತಾ ಪಾಟೀಲ, ಹಿರಿಯರಾದ ಶ್ಯಾಮು ಶಿಂಧೆ, ರಾಮು ಶಿಂಧೆ, ಸೋನು ಜಾನ್ಕರ, ಜಾನು ಪಟಕಾರೆ, ಎಸ್‌ಡಿಎಂಸಿ ಉಪಾಧ್ಯಕ್ಷ ಸೋನು, ಸಿಆರ್‌ಪಿ ವೆಂಕಟರಾಯ ನಾಯಕ ಹಾಜರಿದ್ದರು. ಅಕ್ಷತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಗಂಗಾಧರ ಲಮಾಣಿ ಸ್ವಾಗತಿಸಿ, ನಿರ್ವಹಿಸಿದರು. ಸತೀಶ ನಾಯ್ಕ ವಂದಿಸಿದರು.ಇದೇ ವೇಳೆ ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಸಹಕರಿಸಿದ ಸಂತೋಷ ಅವರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.