ಅತ್ಯಾಡಿ ಗ್ರಾಮದ ನೂತನ ಕಾಲು ಸೇತುವೆ ಲೋಕಾರ್ಪಣೆ ಇಂದು

KannadaprabhaNewsNetwork |  
Published : Aug 25, 2024, 01:49 AM IST
ಚಿತ್ರ :  24ಎಂಡಿಕೆ3 : ಅತ್ಯಾಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಣವ ಸೇತು. | Kannada Prabha

ಸಾರಾಂಶ

ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಮಳೆಗಾದ ಸಂದರ್ಭ ದ್ವೀಪವಾಗಿ ಬದಲಾಗುತ್ತಿತ್ತು. ಉಂಬಾಳೆ ಹೊಳೆ ಉಕ್ಕಿ ಹರಿದು ಜನರಿಗೆ ನೀರು ದಾಟಿ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದೀಗ ಪ್ರಣವ್ ಫೌಂಡೇಶನ್ ವತಿಯಿಂದ ಪ್ರಣವ ಸೇತು ಕಾಲು ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಮಳೆಗಾದ ಸಂದರ್ಭ ದ್ವೀಪವಾಗಿ ಬದಲಾಗುತ್ತಿತ್ತು. ಉಂಬಾಳೆ ಹೊಳೆ ಉಕ್ಕಿ ಹರಿದು ಜನರಿಗೆ ನೀರು ದಾಟಿ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದೀಗ ಪ್ರಣವ್ ಫೌಂಡೇಶನ್ ವತಿಯಿಂದ ಪ್ರಣವ ಸೇತು ಕಾಲು ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಮಳೆಗಾಲದಲ್ಲಂತೂ ಜನರು ಎಲ್ಲರಿಗೂ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತು, ಹೊಳೆ ನೀರಿನ ಮಟ್ಟ ಕಡಿಮೆಯಾಗುವವರೆಗೆ ಕಾಯುತ್ತಾ ಕೂರುವ ಪರಿಸ್ಥಿತಿ ಇದೆ. ಕೋವಿಡ್ ಸಮಯದಲ್ಲಿ ಜನರು ಹೇಗೆ ಮನೆಯಲ್ಲೇ ಕಾಲ ಕಳೆಯಬೇಕಾಯಿತೋ, ಹಾಗೆಯೇ ಮಳೆ ಬಂದರೆ ಅತ್ಯಾಡಿ ಗ್ರಾಮ ‘ಕ್ವಾರಂಟೈನ್ʼ ಆಗಬೇಕಾಗುತ್ತದೆ. ಹೊರಗಿನ ಜಗತ್ತಿಗೆ ಹಾಗೂ ಅತ್ಯಾಡಿ ಗ್ರಾಮ ನಡುವೆ ಇರುವುದು ಉಂಬಾಳೆ ಹೊಳೆ ಮಾತ್ರ. ಈ ಹೊಳೆಯನ್ನು ದಾಟಿಯೇ ಗ್ರಾಮಸ್ಥರು ಹೊರಕ್ಕೆ ಹೋಗಬೇಕಾಗಿತ್ತು. ಇದೀಗ ಈ ಗ್ರಾಮಸ್ಥರಿಗೆ ಸೇತುವೆ ಸಿದ್ಧಗೊಂಡಿದ್ದು, ಸಂತಸ ಮೂಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಣವ್ ಫೌಂಡಶನ್ ಟ್ರಸ್ಟಿ ಕಾರ್ತಿಕ್ ಭಟ್ ಮಾತನಾಡಿ, ಅತ್ಯಾಡಿ ಗ್ರಾಮದಲ್ಲಿ ಜೋರು ಮಳೆ ಬಂದರೆ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. 2024 ರ ಮೇ ತಿಂಗಳ ಕೊನೆಯ ವಾರದಲ್ಲಿ ಪ್ರಣವ್ ಫೌಂಡೇಶನ್ ತಂಡಕ್ಕೆ ಈ ಸಮಸ್ಯೆಯ ಕುರಿತು ತಿಳಿಯಿತು. ಜೂ.1 ರಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ನೈಜ ಪರಿಚಯ ಮಾಡಿಕೊಳ್ಳಲಾಯಿತು. ಬಳಿಕ ಕೆಲವು ತಜ್ಞರು ಹಾಗೂ ಸ್ಥಳೀಯರ ಜೊತೆಗಿನ ಮಾತುಕತೆಯಿಂದ, ಇದಕ್ಕೆ ತಾತ್ಕಾಲಿಕವಾಗಿ ಕಾಲು ಸೇತುವೆ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿದುಬಂತು ಎಂದರು.

ಅದಕ್ಕಾಗಿ ಪ್ರಣವ್ ಫೌಂಡೇಶನ್, ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ತಂಡವನ್ನು ಸಂಪರ್ಕಿಸಿತು. ಈ ತಂಡ ಪ್ರಣವ್ ಫೌಂಡೇಶನ್‌ ಮನವಿಗೆ ಕೂಡಲೇ ಸ್ಪಂದಿಸಿ ಜೂ.17 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಯೋಜನೆ ರೂಪಿಸಲಾಯಿತು. ಜೂನ್ 25 ರಂದು ಪ್ರಣವ್ ಫೌಂಡೇಶನ್ ಟ್ರಸ್ಟಿಗಳು ಹಾಗೂ ಸದಸ್ಯರು ಕೊಡಗು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಹಿತಿ ಹಾಗೂ ಮನವಿ ಪತ್ರ ಸಲ್ಲಿಸಿ ಅನುಮತಿ ಪಡೆದುಕೊಂಡಿತು. ನಂತರ ಆ.10 ರಂದು ಕಾಲುಸೇತುವೆಯ ಕಾಮಗಾರಿ ಆರಂಭವಾಯಿತು. ಆ.22 ಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಅತ್ಯಾಡಿ ಗ್ರಾಮದಲ್ಲಿರುವ ಉಂಬಾಳೆ ಹೊಳೆಗೆ ಅಡ್ಡವಾಗಿಕಾಲು ಸೇತುವೆ ನಿರ್ಮಿಸಲಾಗಿದೆ.

ಉಕ್ಕಿನಿಂದ ಮಾಡಲಾಗಿರುವ ಸೇತುವೆ ಇದಾಗಿದೆ. 24 ಮೀಟರ್ ಉದ್ದ, 0.75 ಮೀಟರ್ ಅಗಲವಿದೆ. ಒಂದೇ ಬಾರಿಗೆ 10 ಜನರು ನಿಲ್ಲಬಹುದು, 5 ವರ್ಷ ಬಾಳಿಕೆ ಇರಲಿದೆ ಎಂದು ವಿವರಿಸಿದರು.

ಸೇತುವೆ ನಿರ್ಮಾಣಕ್ಕೂ ಮುನ್ನ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

ಕೊಡಗು ಜಿಲ್ಲೆಯ ಯಂಗ್‌ ಇಂಡಿಯನ್‌ ಫಾರ್ಮರ್ಸ್‌ ಅಸೋಸಿಯೇಶನ್‌, ಟೀಮ್12 ಆಫ್‌ ರೋಡರ್ಸ್‌ ಮತ್ತು ಮಲ್ನಾಡ್‌ ಯೂತ್‌ ಅಸೋಸಿಯೇಶನ್‌ನವರು ಕಾಲು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದರು.

ಟ್ರಸ್ಟಿ ಮಂಜುನಾಥ್ ಭಟ್ ಮಾತನಾಡಿ, 2020ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಪ್ರಣವ್ ಫೌಂಡೇಶನ್, ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡುತ್ತಿದೆ.

2020ರ ಕೋವಿಡ್ ಸಮಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣದಿಂದ ಪ್ರಣವ್ ಫೌಂಡೇಶನ್‌ನ ಸಾಮಾಜಿಕ ಕಾರ್ಯ ಆರಂಭವಾಯಿತು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಮಹೇಶ್ ಕುಮಾರ್, ನೇತ್ರಾ, ಯೋಜನೆಯ ಸಂಚಾಲಕ ದೇವಿ ಪ್ರಸಾದ್, ಕಿರಣ್ ಅಟ್ಲೂರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು