ಸಿಂಧನೂರಿನಲ್ಲಿ ತಿಮ್ಮಾಪೂರ ಏತ ನೀರಾವರಿಗೆ ನಾಳೆ ಸಿಎಂ ಚಾಲನೆ

KannadaprabhaNewsNetwork |  
Published : Dec 29, 2023, 01:31 AM ISTUpdated : Dec 29, 2023, 01:32 AM IST
28ಕೆಪಿಎಸ್‌ಎನ್‌ಡಿ08: | Kannada Prabha

ಸಾರಾಂಶ

ತಾಲೂಕಿನಾದ್ಯಂತ ಸುಮಾರು 40 ಸಾವಿರ ಎಕರೆಗೆ ನೀರಾವರಿ ಸೌಕರ್ಯ ಒದಗಿಸಲಿರುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಹಿಂದೆ 2018ರಲ್ಲಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯನವರೆ ಶಂಕುಸ್ಥಾಪನೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿದ್ದರೂ ಉಪಕಾಲುವೆಯ ನೀರು ಸಮರ್ಪಕವಾಗಿ ಜಮೀನುಗಳಿಗೆ ಹರಿಯದ ಕಾರಣ ತೊಂದರೆ ಅನುಭವಿಸುತ್ತಿದ್ದ 24ಕ್ಕೂ ಹೆಚ್ಚು ಗ್ರಾಮಗಳ ರೈತರ ಎರಡು ದಶಕಗಳ ಕನಸು ನನಸಾಗಿದೆ. ಸುಮಾರು 40 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸುವ ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆಗೆ ಡಿ.30 ರಂದು ಸಿ.ಎಂ.ಸಿದ್ದರಾಮಯ್ಯ ಆಗಮಿಸುತ್ತಿದ್ದು ರೈತರು ಅತ್ಯಂತ ಸಂತಸದಲ್ಲಿದ್ದಾರೆ.

ವಾರ್ಷಿಕ ಮಳೆ ಪ್ರಮಾಣ ಕುಸಿತ, ತುಂಗಭದ್ರಾ ಅಣೆಕಟ್ಟೆಯಿಂದ ಸಾಕಷ್ಟು ನೀರಿನ ಲಭ್ಯತೆಯ ಕೊರತೆಯ ಕಾರಣದಿಂದಾಗಿ ತಾಲೂಕು ವ್ಯಾಪ್ತಿಯ ಈ ಭಾಗದ ರೈತರ ಜಮೀನುಗಳಿಗೆ ನೀರಿನ ಅಭಾವ ಎದುರಾಗಿತ್ತು. ಇದರಿಂದಾಗಿ ಪ್ರತಿವರ್ಷವೂ ರೈತರು ಬೆಳೆನಷ್ಟ ಅನುಭವಿಸುತ್ತಿದ್ದರು. ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಭತ್ತ ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ಆಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದ ರೈತರು ಸರ್ಕಾರಕ್ಕೆ ಏತ ನೀರಾವರಿ ಯೋಜನೆಗೆ ಬೇಡಿಕೆಯಿಟ್ಟಿದ್ದರು. ಅಂದಿನ ಶಾಸಕ ಹಂಪನಗೌಡ ಬಾದರ್ಲಿ ಈ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ಹಿಂದೆ 2018ರಲ್ಲಿ ಸಿಎಂ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯನವರೆ ಲೋಕಾರ್ಪಣೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಿಂದ 160 ಅಶ್ವಶಕ್ತಿಯ 4 ಮೋಟಾರ್‌ಗಳನ್ನು ಬಳಸಿ ನೀರೆತ್ತಿ 17.10 ಕಿ.ಮೀ. ಅಂತರದಲ್ಲಿರುವ ತುರಕಟ್ಟಿ ಗ್ರಾಮದ ಹತ್ತಿರದ ಆರ್.ಎನ್.ನಗರದ ಬಳಿಯ ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆ ೫೪ ಡಿ.ಗೆ ನೀರು ಹಾಯಿಸುವುದೇ ಯೋಜನೆಯ ಮೂಲ ಉದ್ದೇಶವಾಗಿದೆ. ತದನಂತರ ಕೆಳಭಾಗ ಮತ್ತು ಅಕ್ಕಪಕ್ಕದ 24 ಗ್ರಾಮಗಳ ರೈತರ ಜಮೀನುಗಳಿಗೆ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಕಾಲುವೆಯ ಕೆಳಭಾಗದ 40,000 ಸಾವಿರ ಎಕರೆ ಪ್ರದೇಶಕ್ಕೆ ಅನುಕೂಲವಾಗಲಿದೆ.

90.06 ಕೋಟಿ ರು. ವೆಚ್ಚದಲ್ಲಿ, 34.948 ಎಕರೆಗೆ 90 ಕ್ಯುಸೆಕ್ ನೀರೊದಗಿಸಲು 18 ತಿಂಗಳ ಕಾಲಾವಧಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ನಿಗದಿಪಡಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಐವರು ಸಚಿವರು ಯೋಜನೆಗೆ ಚಾಲನೆ ನೀಡಲು ಆಗಮಿಸಲಿದ್ದಾರೆ. ಉಳಿದ ಕೆಲಸವನ್ನು ಪೂರ್ಣಗೊಳಿಸಲು ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ