ವಿಶ್ವದರ್ಜೆಯ ಕ್ರೀಡಾ ಸಂಕೀರ್ಣ ಲೋಕಾರ್ಪಣೆ

KannadaprabhaNewsNetwork |  
Published : Mar 15, 2026, 02:15 AM IST
ಧಾರವಾಡದಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ಉದ್ಘಾಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಬ್ಯಾಡ್ಮಿಂಟನ್ ಆಟವಾಡಿ ಗಮನ ಸೆಳೆದರು. | Kannada Prabha

ಸಾರಾಂಶ

ದೇಶಕ್ಕಾಗಿ ಆಡುವ ಕ್ರೀಡಾಪಟುಗಳಿಗಾಗಿ ಉತ್ತಮ ಸುಸಜ್ಜಿತವಾದ ಕ್ರೀಡಾ ಸಂಕೀರ್ಣ ಇಂದು ನಿರ್ಮಾಣವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಕೇಂದ್ರ ಸಚಿವ ಮನ್ಸುಖ್‌ ಮಾಡಂವೀಯ ಹೇಳಿದರು.

ಧಾರವಾಡ:

ನಾವು ಸಹ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬೇಕೆಂಬ ಧಾರವಾಡ ಕ್ರೀಡಾಪಟುಗಳ ಬಹು ವರ್ಷಗಳ ಕ್ರೀಡಾ ಕನಸೊಂದು ನನಸಾಗುವ ಸಮಯ ಬಂದಿದೆ. ಇಲ್ಲಿಯ ಕೇಂದ್ರ ಗ್ರಂಥಾಲಯ ಬಳಿ ₹ 52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಹಾಗೂ ಕ್ರೀಡಾ ಸಂಕೀರ್ಣವನ್ನು ಶನಿವಾರ ಅಧಿಕೃತವಾಗಿ ಉದ್ಘಾಟಿಸಲಾಗಿದೆ.

ಈಜುಕೊಳ ಹಾಗೂ ಕ್ರೀಡಾ ಸಂಕೀರ್ಣ ಉದ್ಘಾಟಿಸಿದ ಕೇಂದ್ರ ಸಚಿವ ಮನ್ಸುಖ್‌ ಮಾಡಂವೀಯ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ ಕಟ್ಟುವವರು. ಅವರು ಉತ್ತಮ ಕ್ರೀಡಾಪಟುಗಳಾಗಿ ಧಾರವಾಡ ಅಷ್ಟೇ ಅಲ್ಲ ಇಡೀ ದೇಶಕ್ಕೆ ಹೆಸರು ತರುವಂತಾಗಬೇಕು ಎಂದು ಹೇಳಿದರು.

ದೇಶಕ್ಕಾಗಿ ಆಡುವ ಕ್ರೀಡಾಪಟುಗಳಿಗಾಗಿ ಉತ್ತಮ ಸುಸಜ್ಜಿತವಾದ ಕ್ರೀಡಾ ಸಂಕೀರ್ಣ ಇಂದು ನಿರ್ಮಾಣವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಹಿಂದೆ ಧಾರವಾಡದಲ್ಲಿ ಬರೀ ಸಣ್ಣ ಈಜುಗೊಳ ಇತ್ತು. 2018ರಲ್ಲಿ ಹೊಸ ಈಜುಗೋಳ ನಿರ್ಮಿಸಲು ಯೋಜಿಸಿದ್ದೇವು. ಆದರೆ, ಒಎನ್‌ಜಿಸಿ ಸೇರಿದಂತೆ ಹಲವಾರು ಕಂಪನಿಗಳಿಂದ ಸಿಎಸ್ಆರ್ ನಿಧಿ ಬಳಸಿಕೊಂಡು ಇಂದು ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಿಸಿದ್ದೇವೆ ಎಂದರು.

ಇದನ್ನು ನಿರ್ವಹಣೆ ಮಾಡುವುದು ಕಷ್ಟವಿದೆ. ಹೀಗಾಗಿ ರಾಜ್ಯ ಸರ್ಕಾರ ಅದರಲ್ಲೂ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದರ ಬಗ್ಗೆ ಗಮನ ಹರಿಸಬೇಕು. ಸರ್ಕಾರದ ಮಾರ್ಗದರ್ಶನದಲ್ಲಿ ಒಂದು ಸೊಸೈಟಿ ಮಾಡಿ ಇದನ್ನು ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು ಸದ್ಯ ಇದನ್ನು ನಿರ್ವಹಿಸಬೇಕು. ಅಲ್ಲದೇ ಜಿಲ್ಲೆಯಲ್ಲಿ ಸಾಯಿ ಸ್ಪೋರ್ಟ್ ತೊಂದರೆಯಲ್ಲಿದ್ದು ಇದರ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹಳೆ ಈಜುಗೋಳ ಕೇವಲ 30 ಮೀಟರ್ ಇತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಿಗೆ ತರಬೇತಿ ಪಡೆಯಲು ತೊಂದರೆಯಾಗುತ್ತಿತ್ತು. ಇದೀಗ ವಿಶ್ವ ದರ್ಜೆಯ 50 ಮೀಟರ್ ಈಜುಗೋಳ ಇಲ್ಲಿ ನಿರ್ಮಾಣವಾಗಿದೆ. ಇನ್ನೊಂದೆಡೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇರುವ ಒಳಾಂಗಣ ಕ್ರೀಡಾಂಗಣ ಕೇವಲ ಅಧಿಕಾರಿಗಳಿಗೆ ಸೀಮಿತವಾಗಿದೆ. ಆದರೆ, ಈ ಕ್ರೀಡಾಂಗಣ ಯುವ ಕ್ರೀಡಾ ಪಟುಗಳಿಗೆ ಮೀಸಲಾಗುವಂತಾಗಲಿ ಎಂದು ಸಲಹೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎಂ.ಆರ್. ಪಾಟೀಲ್, ಎಸ್.ವಿ. ಸಂಕನೂರ, ಪ್ರದೀಪ್ ಶೆಟ್ಟರ್, ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ ಚೌಹ್ವಾಣ, ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಶಾಕೀರ್ ಸನದಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಸಿಇಒ ಭುವನೇಶ ಪಾಟೀಲ್, ಸ್ವರ್ಣ ಗ್ರುಪ್‌ನ ವಿ.ಎಸ್.ವಿ. ಪ್ರಸಾದ್ ಸೇರಿದಂತೆ ಗಣ್ಯರಿದ್ದರು.

ಧಾರವಾಡದ ಕ್ರೀಡಾಪಟುಗಳು ₹ 25 ಲಕ್ಷ ವೆಚ್ಚದ ಕ್ರೀಡಾ ಸಾಮಗ್ರಿಗಳಿಗಾಗಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಅವರಿಗೆ ಅಗತ್ಯವಾದ ಎಲ್ಲ ಕ್ರೀಡಾ ಸಾಮಾಗ್ರಿ ನೀಡಲಾಗುವುದು.

ಪ್ರಹ್ಲಾದ ಜೋಶಿ, ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ಪಾಟೀಲಗೆ ವಿಜಯೇಂದ್ರ, ಜೋಶಿ ಸಮಾಧಾನ
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ