ಮಂಗಳೂರು: ಬಿಜೆಪಿಯವರು ದ್ವೇಷ ಭಾಷಣ ಮಾಡುತ್ತಿದ್ದಾರೆಯೇ? ಅವರಿಗೇಕೆ ಈ ಕುರಿತು ಆತಂಕ ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆ ಜಾರಿಯಾಗದಿದ್ದರೂ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದರು.ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಎಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮಾತುಗಳು, ಸುಳ್ಳಿನ ಮಾತು, ಸುಳ್ಳಿನ ಆಧಾರದ ಮೇಲೆ ಸೃಷ್ಟಿ ಮಾಡುವ ಸುದ್ದಿಗಳು, ವಾಸ್ತವಾಂಶಕ್ಕಿಂತ ಮುಂಚಿತವಾಗಿ ಅಭಿಪ್ರಾಯ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಸಮಾಜವನ್ನು ಒಡೆಯುವ ಕೆಲಸ, ಅದನ್ನು ನಿಯಂತ್ರಿಸುವುದು ಸರ್ಕಾರದ ಕರ್ತವ್ಯ. ಬಿಜೆಪಿಯವರಿಗೆ ಯಾಕೆ ಭಯ ಎಂದು ಪ್ರಶ್ನಿಸಿದರು.ಕೇಂದ್ರದಲ್ಲಿ ಬಿಜೆಪಿಯವರು ಕಾನೂನಿನ ಮೂಲಕ ಯಾವ ರೀತಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಕೇಂದ್ರದ ವಿರುದ್ಧ ಮಾತನಾಡಿದರೆ ಉಸಿರುಗಟ್ಟಿಸುವ ವಾತಾವರಣ ಇದೆ. ಪ್ರಧಾನಿ ಮೋದಿ, ಅಮಿತ್ ಶಾ ರೀತಿ ನಾವು ಮಾಡಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕುರಿತಾಗಿ ಉಂಟಾದ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಕೆಲಸ ಕಾರ್ಯಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ರಾಜ್ಯಪಾಲರ ಭಾಷಣಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದರೆ ಅವರ ನಡೆ ಕಂಡಾಗ ಅವರು ಕೇಂದ್ರದ ಕಪಿಮುಷ್ಠಿಯಲ್ಲಿರುವುದು, ಬಿಜೆಪಿ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದರು.