ರಾಮನಗರ: ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸುವ ಪ್ರಕ್ರಿಯೆ ಮುಂದುವರೆಸುವುದು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ತರಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಒತ್ತಾಯಿಸಿದರು
ರಾಮನಗರ: ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸುವ ಪ್ರಕ್ರಿಯೆ ಮುಂದುವರೆಸುವುದು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ತರಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಒತ್ತಾಯಿಸಿದರು.
ತಾಲೂಕಿನ ಯರೇಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ನಬಾರ್ಡ್ ಬ್ಯಾಂಕಿನೊಂದಿಗೆ ಸೇರಿ ಅಪೆಕ್ಸ್ ಬ್ಯಾಂಕ್ ಮತ್ತು ಬಿಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ವಿತರಿಸಲಾಗುತ್ತಿತ್ತು. ಇದರಲ್ಲಿ ಕೇಂದ್ರ ಸರ್ಕಾರ ಶೇ.40 ಹಾಗೂ ರಾಜ್ಯಸರ್ಕಾರ ಶೇ.60ರಷ್ಟು ಅನುಪಾತದಲ್ಲಿ ಬೆಳೆ ಸಾಲದ ಹಣ ಭರಿಸುತ್ತಿತ್ತು. ಇದು ಎಲ್ಲ ರಾಜ್ಯಗಳಲ್ಲಿಯೂ ಸುಗಮವಾಗಿ ಸಾಗುತ್ತಿತ್ತು. ಆದರೀಗ ಅಮಿತ್ ಶಾ ಕೇಂದ್ರ ಸಹಕಾರ ಖಾತೆ ಹಾಗೂ ನಿರ್ಮಲಾ ಸೀತರಾಮನ್ ಹಣಕಾಸು ಸಚಿವರಾದ ಮೇಲೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಎಲ್ಲ ಸಾಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲಸೌಲಭ್ಯಗಳನ್ನು ಶೇ.40ರಿಂದ ಶೇ.10ಕ್ಕೆ ಸೀಮಿತಗೊಳಿಸಿದೆ. ಈಗ ಶೇ.10ರಷ್ಟಿರುವ ಸಾಲಸೌಲಭ್ಯಗಳನ್ನೂ ಸ್ಥಗಿತಗೊಳಿಸುವ ಪ್ರಯತ್ನಗಳು ಸಾಗಿವೆ. ಇದರಿಂದಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ನೀಡುವುದು ಕಠಿಣವಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ಬಗೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಯಾವುದೊ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಅಥವಾ ತಮ್ಮ ಪಕ್ಷದ ಜನಪ್ರಿಯತೆಗಾಗಿ ಸಾಲ ಮನ್ನಾ ಮಾಡುತ್ತಾರೆ. ಅದರ ಕ್ರೆಡಿಟ್ ಆಯಾಯ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆಯೇ ವಿನಾಃ ಕೇಂದ್ರ ಸರ್ಕಾರಕ್ಕೆ ಸಿಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ಸೌಲಭ್ಯವನ್ನು ಕೇವಲ ಶೇಕಡ 10ರಷ್ಟು ಅನುಪಾತಕ್ಕೆ ಸೀಮಿತಗೊಳಿಸಿದೆ. ಅಲ್ಲದೆ, ಕುರಿ, ಕೋಳಿ ಸಾಕಾಣಿಕೆಗೆ ನೀಡುತ್ತಿದ್ದ ಸಬ್ಸಿಡಿ ಸಾಲವನ್ನೂ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿದೆ. ಇದರ ದುಷ್ಪರಿಣಾಮ ಬಿಡಿಸಿಸಿ ಬ್ಯಾಂಕ್ ಮತ್ತು ಸೊಸೈಟಿಗಳ ಮೇಲೆ ಬೀರುತ್ತಿದೆ ಎಂದು ಹೇಳಿದರು.
ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಲಾಗದು:
ಈಗ ಕೇಂದ್ರ ಸರ್ಕಾರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇನ್ನು ಕೇಂದ್ರದ ಸ್ವಾಮ್ಯಕ್ಕೆ ಒಳಪಟ್ಟಿರುವ ನಬಾರ್ಡ್ ಬಡ್ಡಿ ದರದಲ್ಲಿ ಸಾಲ ಕೊಡಲು ಸಿದ್ಧವಿದೆ. ನಬಾರ್ಡ್ ನಿಂದ ಬಡ್ಡಿಗೆ ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೊಡಲು ಸಾಧ್ಯವಿಲ್ಲ. ಇದರಿಂದ ಡಿಸಿಸಿ ಬ್ಯಾಂಕ್ ಗಳು ಅಭಿವೃದ್ಧಿ ಕಾಣಲಾಗದೆ ಅವನತಿಯತ್ತ ಸಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗ ಸಿಎಸ್‌ಆರ್ ಅನುದಾನವನ್ನು ಶಿಕ್ಷಣ, ಪಾರ್ಕ್, ದೇವಸ್ಥಾನ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಂತಹ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್‌ಆರ್ ಅನುದಾನದ ವ್ಯಾಪ್ತಿಗೆ ತಂದಲ್ಲಿ ಸಂಘಗಳು ಸ್ವಂತ ಸೂರು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಸೊಸೈಟಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಅನುಕೂಲಗಳು ಆಗಲಿವೆ ಎಂದು ಯರೇಹಳ್ಳಿ ಮಂಜು ತಿಳಿಸಿದರು.
ಯರೇಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಮಾಯಣ್ಣ, ನಿರ್ದೇಶಕರಾದ ಜೆ.ಜೆ.ಜಯಪಾಲ್, ಎಸ್.ಲೋಕೇಶ್, ಮಂಗಮ್ಮ, ಕೆ.ಪ್ರಶಾಂತ್, ಯೋಗರಾಜ್, ಕವಿತಾ ಆನಂದ್, ರತ್ನಮ್ಮ, ಕೃಷ್ಣಯ್ಯ, ಬಿಳಿಯಪ್ಪ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಎಂ. ಮುಕುಂದರಾಜು, ಮುಖಂಡರಾದ ಕೃಷ್ಣ, ಹಾಪ್ ಕಾಮ್ಸ್ ಪುಟ್ಟಸ್ವಾಮಿ, ಅಂಕನಹಳ್ಳಿ ರವಿ, ಮೆಳೆಹಳ್ಳಿ ಶಿವರಾಜ್ ಹಾಜರಿದ್ದರು.
ಬಾಕ್ಸ್ .................
ಜಿಲ್ಲೆಯಿಂದ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ರವಿ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದೇವೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ರವಿ ಅವರಿಗೆ 5 - 6 ಕೋಟಿ ರು. ಸೊಸೈಟಿಗಳಿಗೆ ವಿನಿಯೋಗಿಸಲು ಅವಕಾಶ ಇದೆ. ಜಿಲ್ಲೆಯಲ್ಲಿರುವ ಸೊಸೈಟಿಗಳ ಅಭಿವೃದ್ಧಿಗೆ ಸಹಕರಿಸಬೇಕು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್ ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.
- ಯರೇಹಳ್ಳಿ ಮಂಜು, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್
24ಕೆಆರ್ ಎಂಎನ್ 1.ಜೆಪಿಜಿ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
24ಕೆಆರ್ ಎಂಎನ್ 2.ಜೆಪಿಜಿ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜುರವರು ಯರೇಹಳ್ಳಿ ಸೊಸೈಟಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕ ವೀರಭದ್ರೇಗೌಡರ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಪಿಎಫ್ ಹಣದ ಚೆಕ್ ಅನ್ನು ವಿತರಣೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.