ಪಠ್ಯದಲ್ಲಿ ಸುಗಮ ಸಂಗೀತ ಅಳವಡಿಸಲಿ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹ

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ಕನ್ನಡ ಸಾರಸ್ವತ ಲೋಕದ ಅನ್ಯಘ್ನ ರತ್ನಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಪು.ತಿ.ನ, ಬೇಂದ್ರೆಯಂತಹ ಕವಿಗಳ ಕೊಡುಗೆ ಅನನ್ಯವಾಗಿದೆ. ಇವರ ಗೀತೆಗೆ ಪಿ.ಕಾಳಿಂಗರಾಯ, ಸಿ.ಎಸ್.ಅಶ್ವಥ್, ಮೈಸೂರು ಅನಂತಸ್ವಾಮಿಯಂತಹ ಗಾಯಕರು ಧ್ವನಿಯಾಗಿ ಗಟ್ಟಿಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಠ್ಯದಲ್ಲಿ ಸುಗಮ ಸಂಗೀತಾ ಅಳವಡಿಸಲು ಸರ್ಕಾರ ಮುಂದಾದರೆ ಮಾತ್ರ ಕನ್ನಡ ನಾಡು, ನುಡಿ ವಿದ್ಯಾರ್ಥಿಗಳಲ್ಲಿ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಕಿಕ್ಕೇರಿಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತಿ ಉಳಿಸೋಣಾ - ಸಂಗೀತಾ ಕಲಿಯೋಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಕವಿತೆ, ಸುಗಮ ಸಂಗೀತಾದ ಮಾಧುರ್ಯತೆಗೆ ಬಲು ಶಕ್ತಿ ಇದೆ. ಇವುಗಳಿಗೆ ಮನಸೋಲದ ಮನಸ್ಸುಗಳಿಲ್ಲ ಎಂದರು.

ಕನ್ನಡ ಸಾರಸ್ವತ ಲೋಕದ ಅನ್ಯಘ್ನ ರತ್ನಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಪು.ತಿ.ನ, ಬೇಂದ್ರೆಯಂತಹ ಕವಿಗಳ ಕೊಡುಗೆ ಅನನ್ಯವಾಗಿದೆ. ಇವರ ಗೀತೆಗೆ ಪಿ.ಕಾಳಿಂಗರಾಯ, ಸಿ.ಎಸ್.ಅಶ್ವಥ್, ಮೈಸೂರು ಅನಂತಸ್ವಾಮಿಯಂತಹ ಗಾಯಕರು ಧ್ವನಿಯಾಗಿ ಗಟ್ಟಿಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಮೊಬೈಲ್‌ ಇಲ್ಲದೆ ಬದುಕಿಲ್ಲ ಎನ್ನುವಂತಹ ಸ್ಥಿತಿ ಅಪಾಯಕಾರಿಯಾಗಿದೆ. ಮಕ್ಕಳಲ್ಲಿ ಖಿನ್ನತೆ, ದೈಹಿಕ, ಮಾನಸಿಕ ಹಿಂಸೆ ಕಾಡುತ್ತಿದೆ. ಮೊಬೈಲ್‌ನಿಂದ ದೂರಸರಿಸಿ ಮಕ್ಕಳಿಗೆ ಸಂಗೀತಾಅಭಿರುಚಿ ಮೂಡಲಿ. ಹಿರಿಯರು ತಮ್ಮ ಅಂತಿಮ ಕಾಲದಲ್ಲಿ ನೆಮ್ಮದಿ ಬಯಸಲು ಸಂಗೀತಾ ಕೇಳುತ್ತಿದ್ದರು. ಮಧುರಗೀತೆ ಕೇಳಿದ ಗೋವುಗಳು ಹೆಚ್ಚು ಹಾಲು ಕೊಡುವುದು. ಮರಗಿಡಗಳು ಆರೋಗ್ಯಕರವಾಗಿ ಉಸಿರಾಡುವುದು ಸಾಬೀತಾಗಿದೆ ಎಂದು ಸಂಗೀತಾದ ಮಹತ್ವ ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಶ್ರೇಷ್ಟ ಕವಿಗಳು ಗೀತೆಗಾಯನದ ತರಬೇತಿಯನ್ನು ಉಚಿತವಾಗಿ ನೀಡಲು ಅಕಾಡೆಮಿ ಶ್ರಮಿಸುತ್ತಿದೆ. ಕೆ.ಎಸ್.ನ. ಅವರ ಗೀತೆ, ಬದುಕು, ಬರಹಗಳನ್ನು ಸಮಗ್ರವಾಗಿ ಪರಿಚಯ ಮಾಡಿಕೊಟ್ಟರೆ ನಮ್ಮೂರ ಕವಿ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಇಂಗಿತ ವ್ಯಕ್ತಪಡಿಸಿದರು.

ಇದೇ ವೇಳೆ ವಿವಿಧ ಗೀತೆಗಳನ್ನು ಹಾಡಿ ಮಕ್ಕಳೊಂದಿಗೆ ಹಾಡಿಸಿ ಖುಷಿ ಪಡಿಸಿದರು. ಮಕ್ಕಳು ಪರಿಸರ ಸಂರಕ್ಷಣೆಗೆ ಬದ್ಧರಿರುವುದಾಗಿ ಪ್ರತಿಜ್ಞೆ ಮಾಡಿದರು. ಕವಿತಾ, ಸವಿತಾ, ತ್ರಿವೇಣಿಇದ್ದರು.

ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಡ್ಯ: ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ರಾಗಿಮುದ್ದನಹಳ್ಳಿ ಸಮೀಪದ ಜಲಶುದ್ಧಿಕರಣಗಾರದಲ್ಲಿ ನೆಲಮಟ್ಟದ ಜಲಸಂಗ್ರಹಾಗಾರವನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಜ.22 ರಂದು ಕೈಗೊಳ್ಳಬೇಕಾಗಿರುವುದರಿಂದ ನೀರನ್ನು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಮಂಡ್ಯ ನಗರದ ಸಾರ್ವಜನಿಕರಿಗೆ ಜನವರಿ 22 ಮತ್ತು 23 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಡ್ಯ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article