ಕನ್ನಡಪ್ರಭ ವಾರ್ತೆ ಮಂಗಳೂರು
ತುಳು ಭಾಷೆ ಸಂಶೋಧನೆ ಹಾಗೂ ತುಳು ಭಾಷೆಯ ಉಳಿವಿಗಾಗಿ ಸೇವೆ ಸಲ್ಲಿಸಿದವರು ದಿ. ಪಾಲ್ತಾಡಿಯವರು. ಓರ್ವ ಅಧ್ಯಾಪಕರಾಗಿ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಕಲಿಕೆಗಾಗಿ ತುಳುವಿನ ಸೇರ್ಪಡೆ ಪಾಲ್ತಾಡಿಯವರು ನೀಡಿರುವ ದೊಡ್ಡ ಕೊಡುಗೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಕಲ್ಕೂರ ಕಚೇರಿಯಲ್ಲಿ ಗುರುವಾರ ನಡೆದ ಪಾಲ್ತಾಡಿ ರಾಮಕೃಷ್ಣ ಆಚಾರ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ‘ಪಾಲೆದ ಕೆತ್ತೆ’ ಎನ್ನುವ ಆಯುರ್ವೇದ ಗಿಡ ಮೂಲಿಕೆ ಔಷಧಿಯನ್ನು ಮೊದಲ್ಗೊಂಡು ಮಗುವನ್ನು ಮಲಗಿಸಲು ಬಳಸುತ್ತಿದ್ದ ಹಾಳೆ ಸಹಿತವಾಗಿ ತುಳು ನಾಡಿನ ನಂಬಿಕೆ, ಆಚರಣೆಗಳು, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಜನಪದ ಒಳಮರ್ಮವನ್ನು ಅಧ್ಯಯನ ಮಾಡಿದ ಓರ್ವ ಅದ್ಭುತ ಸಾಧಕ ಶ್ರೇಷ್ಠರು ಪಾಲ್ತಾಡಿಯವರು ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸಿ, ಓರ್ವ ಅಧ್ಯಾಪಕರಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳೆಸುವಲ್ಲಿ ಸದಾ ಕ್ರಿಯಾಶೀಲರಾಗಿದ್ದರು ಎಂದರು.ಸಾರಸ್ವತ ಲೋಕಕ್ಕೆ ಪಾಲ್ತಾಡಿಯವರ ಕೊಡುಗೆ ಅನನ್ಯವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.ಸಂಗೀತ ಕಲಾವಿದರಾದ ತೋನ್ಸೆ ಪುಷ್ಕಳ್ ಕುಮಾರ್ ಪಾಲ್ತಾಡಿಯವರ ಕೃತಿಯನ್ನು ವಿಶಿಷ್ಟವಾಗಿ ಹಾಡಿದರು.ಗಣ್ಯರಾದ ಡಾ. ಮಂಜುಳಾ ಶೆಟ್ಟಿ, ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ. ತಾರಾನಾಥ ಹೊಳ್ಳ, ಅಬೂಬಕರ್ ಕೈರಂಗಳ, ಮೂಲ್ಕಿ ಕರುಣಾಕರ ಶೆಟ್ಟಿ, ಜಿ.ಕೆ. ಭಟ್ ಸೇರಾಜೆ, ಚಂದ್ರಶೇಖರ ಶೆಟ್ಟಿ, ಅರುಣಾ ನಾಗರಾಜ್ ಮೊದಲಾದವರು ಪುಷ್ಪನಮನ ಸಲ್ಲಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.