ಹಾವೇರಿ: ಜಮೀನು ನೋಂದಣಿಗಾಗಿ ಅರ್ಜಿ ಸಲ್ಲಿಸಿದವರಿಗೆ ನೋಂದಣಿ ಮಾಡಿಸಲು ಈ ಹಿಂದಿನಂತೆ 24 ಗಂಟೆಯ ಕಾಲಾವಕಾಶ ಕೊಡಬೇಕು. ಅದಕ್ಕಾಗಿ ಕಾವೇರಿ 2.0 ಸಾಫ್ಟ್‌ವೇರ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಇಲ್ಲಿಯ ತಾಲೂಕು ಆಡಳಿತ ಸೌಧದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಬಳಿಕ ಸ್ಥಳಕ್ಕೆ ಜಿಲ್ಲಾ ನೋಂದಣಿ ಕಚೇರಿ ಅಧಿಕಾರಿಗಳು ಆಗಮಿಸಿ, ಬಾಗಿಲು ತೆರೆಸಿ ನೋಂದಣಿ ಸರತಿಯಲ್ಲಿದ್ದವರ ನೋಂದಣಿ ಮಾಡಿಸಿಕೊಟ್ಟರು. ಈ ಸಮಸ್ಯೆ ಪರಿಹರಿಸುವ ಕುರಿತು ಇಲಾಖೆಗೆ ತಿಳಿಸುವುದಾಗಿ ಭರವಸೆ ನೀಡಿದರು.
ಗುರುವಾರ ಸಂಜೆ ಜಮೀನು ನೋಂದಣಿ ಮಾಡಿಸಬೇಕಿತ್ತು. ಆಗ ಬಂದರೆ ನಾಳೆ ಬನ್ನಿ ಎಂದರು. ಬ್ಯಾಡಗಿಯಿಂದ ಹಾವೇರಿ ಕಚೇರಿಗೆ ಬರುವಷ್ಟರಲ್ಲಿ ಐದು ನಿಮಿಷ ತಡವಾಯಿತು. ಅದಕ್ಕಾಗಿ ಮತ್ತೆ ನಾಳೆ ಬನ್ನಿ ಎಂದರು. ಸರ್ಕಾರ ಈ ನಿಯಮ ತಿದ್ದುಪಡಿ ಮಾಡಿ ಮೊದಲಿನಂತೆ 24 ತಾಸುಗಳ ಕಾಲಾವಕಾಶ ಕೊಡಬೇಕು ಎಂದು ಬ್ಯಾಡಗಿ ನಿವಾಸಿ ಶಿವಾನಂದ ಕಾಸಂಬಿ ಹೇಳಿದರು.