ದೊಡ್ಡಬಳ್ಳಾಪುರ: ನ್ಯಾನೋ ಯೂರಿಯಾ ಬಳಕೆಯಿಂದ ರೈತರ ಖರ್ಚು ಕಡಿಮೆಯಾಗುವುದಲ್ಲದೇ ಹೆಚ್ಚಿನ ಆದಾಯ ಪಡೆಯಬಹುದು ಎಂದು ವಿಜ್ಞಾನಿ ಡಾ.ವೆಂಕಟೇಗೌಡ ತಿಳಿಸಿದರು.
ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವಾಗಿದೆ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತಾವರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು. ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೋ ಯೂರಿಯ ಸಿಂಪಡಣೆಯು ಯೋಗ್ಯ ಮಾರ್ಗವಾಗಿದೆ ಎಂದರು.
ನ್ಯಾನೋ ಯೂರಿಯಾದ ಸೂಕ್ಷ್ಮ ಕಣಗಳು ಹೆಚ್ಚಿನ ಸುತ್ತಳತೆ ಹೊಂದಿದ್ದು, ಎಲೆಗಳ ಮೇಲೆ ಸಿಂಪಡಣೆ ಮಾಡಿದಾಗ ಶೀರ್ಘವಾಗಿ ಎಲೆಗಳಲ್ಲಿನ ಸೂಕ್ಷ್ಮ ರಂದ್ರಗಳಾದ ಸ್ಟೋಮ್ಯಾಟ ಮೂಲಕ ಸಸ್ಯದ ಶರೀರದೊಳಗೆ ಸೇರಿ ಪೋಷಕಾಂಶಗಳು ನ್ಯಾಯೋಚಿತವಾಗಿ ಸಸ್ಯದ ಬೆಳವಣಿಗೆಗೆ ದೊರೆಯುವಂತೆ ಮಾಡುತ್ತವೆ. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.ಇಫ್ಕೋ ಸಂಸ್ಥೆಯ ಚೇತನ್ ಮಾತನಾಡಿ, ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವುದರ ಮೂಲಕ ರೈತರು ಕೃಷಿ ಕಾರ್ಮಿಕರ ಕೊರತೆ ನೀಗಿಸಬಹುದೆಂದು ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪಿ.ರಾಘವೇಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಅತಿ ದೊಡ್ಡ ಸಮಸ್ಯೆಯಾಗಿದೆ. ಸಸ್ಯ ಪೋಷಕಾಂಶಗಳನ್ನು ಸಿಂಪಡಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿ ಡ್ರೋನ್ ಬಳಸಿ ಸಿಂಪಡಣೆ ಮಾಡುವುದು ಒಳ್ಳೆಯ ಮಾರ್ಗವಾಗಿದೆ ಎಂದರು.ಗ್ರಾಮದ ಸದಾಶಿವಮೂರ್ತಿ ರವರ ಜಮೀನಿನಲ್ಲಿ ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾವನ್ನು ಸಿಂಪಡಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪಿ.ರಾಘವೇಂದ್ರ, ಹಾಡೋನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೆಂಕಟೇಗೌಡ , ಕೊನಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಗಳ, ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ್ , ಇಪ್ಕೋ ಸಂಸ್ಥೆಯ ಪ್ರತಿನಿಧಿಗಳು, ಪ್ರಗತಿ ಪರ ರೈತರು, ಗ್ರಾಮದ ರೈತರು, ರೈತ ಮಹಿಳೆಯರು, ಕೃಷಿ ಅಧಿಕಾರಿಗಳು ಹಾಗೂ ಆತ್ಮ ಯೋಜನೆ ಸಿಬ್ಬಂದಿ ಭಾಗವಹಿಸಿದ್ದರು.