ಆದಾಯ ತೆರಿಗೆ ಎಂಬುದು ಪಿಡುಗಲ್ಲ: ಎಂ.ಸಿ. ಸುಂದರ್

KannadaprabhaNewsNetwork | Published : Apr 28, 2024 1:27 AM

ಸಾರಾಂಶ

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾದ ತೆರಿಗೆ ಸಂದಾಯ ಅತಿ ಮುಖ್ಯವಾದದ್ದು. ಯಾರು ಕಾನೂನನ್ನು ಮಾಡುತ್ತಾರೆಯೋ ಹಾಗೂ ಜಾರಿಗೊಳಿಸುತ್ತಾರೆಯೋ ಅಂತಹವರಲ್ಲಿ ಕೆಲವರು ಕಾನೂನನ್ನು ಮುರಿಯುತ್ತಾರೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆಯೇ ಮಾಧ್ಯಮಾವೂ ಒಂದಾಗಿದೆ. ಆದ್ದರಿಂದ ಮಾಧ್ಯಮದವರು ತೆರಿಗೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ದಿಕ್ಕಿನಲ್ಲಿ ಸಕ್ರಿಯರಾಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆದಾಯ ತೆರಿಗೆ ಎಂಬುದು ಪಿಡುಗಲ್ಲ. ಅದು ದೇಶದ ಅಭಿವೃದ್ಧಿಗೆ ಪೂರಕವಾದುದ್ದು. ಹೀಗಾಗಿ, ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಇದು ಮೂಲಭೂತ ಕರ್ತವ್ಯ ಎಂದು ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಸಲಹೆಗಾರ ಎಂ.ಸಿ.ಸುಂದರ್ ತಿಳಿಸಿದರು.

ನಗರದ ಶ್ರೀನಟರಾಜ ಸ್ನಾತಕೋತ್ತರ ಕೇಂದ್ರವು (ಎಂ.ಕಾಂ.) ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ರಿಟರ್ನ್- ಹಳೆಯ ಮತ್ತು ಹೊಸ ಆಡಳಿತ ಕುರಿತು ಅವರು ಮಾತನಾಡಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾದ ತೆರಿಗೆ ಸಂದಾಯ ಅತಿ ಮುಖ್ಯವಾದದ್ದು. ಯಾರು ಕಾನೂನನ್ನು ಮಾಡುತ್ತಾರೆಯೋ ಹಾಗೂ ಜಾರಿಗೊಳಿಸುತ್ತಾರೆಯೋ ಅಂತಹವರಲ್ಲಿ ಕೆಲವರು ಕಾನೂನನ್ನು ಮುರಿಯುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆಯೇ ಮಾಧ್ಯಮಾವೂ ಒಂದಾಗಿದೆ. ಆದ್ದರಿಂದ ಮಾಧ್ಯಮದವರು ತೆರಿಗೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ದಿಕ್ಕಿನಲ್ಲಿ ಸಕ್ರಿಯರಾಗಬೇಕಾಗಿದೆ. ಆಯಾ ಕಾಲಕ್ಕೆ ಬದಲಾಗುವ ತೆರಿಗೆಯ ನಿಯಮವನ್ನು ಅರ್ಥೈಸಿಕೊಂಡು ತೆರಿಗೆ ಪಾವತಿದಾರರಿಗೆ ಅರಿವು ಮೂಡಿಸಬೇಕು ಎಂದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ತೆರಿಗೆ ಪಾವತಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಆಯಾ ಕಾಲಕ್ಕೆ ಬದಲಾಗುವ ತೆರಿಗೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ಪಾವತಿಸಿದರೆ ಭವ್ಯ ಭಾರತ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಎಂ.ಕಾಂ.ಮತ್ತು ಬಿ.ಕಾಂ. ವಿದ್ಯಾರ್ಥಿಗಳು ಇದನ್ನೂ ತಲ ಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು. ಪ್ರತಿಭೆ ನಿಂತ ನೀರಲ್ಲ. ಅದು ಯಾವಾಗಲೂ ಚಲನಶೀಲವಾಗಿರಬೇಕು. ಇದೇ ರೀತಿ ವಿದ್ಯಾರ್ಥಿಗಳು ಸದರಿ ಕ್ರಿಯಾಶೀಲರಾಗಿ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ವಿದ್ಯಾರ್ಥಿದಿಶೆಯಲ್ಲಿ ಶಿಸ್ತು, ಸಂಯಮವನ್ನು ರೂಢಿಸಿಕೊಂಡು ಅಧ್ಯಯನಶೀಲರಾಗಬೇಕು ಎಂದರು.

ಪೃಥ್ವಿ ಸ್ವಾಗತಿಸಿದರು. ಅಭಿಷೇಕ್ ಪ್ರಾರ್ಥಿಸಿದರು. ನಿಶಾ ವಂದಿಸಿದರು.

ನಾಳೆ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ 16ನೇ ಪದವೀಧರರ ದಿನಾಚರಣೆ

ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಜೆಎಸ್.ಎಸ್. ಮಹಿಳಾ ಕಾಲೇಜಿನಲ್ಲಿ ಏ. 29ರ ಬೆಳಗ್ಗೆ 11ಕ್ಕೆ 16ನೇ ಪದವೀಧರರ ದಿನ ಏರ್ಪಡಿಸಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತೆ ಸಿ. ಶಿಖಾ ಭಾಗವಹಿಸುವರು. ಜೆಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾವಿಧಿ ಬೋಧಿಸುವರು. ಅಮೆರಿಕಾದ ಶಾಲಿನಿ ಗುಪ್ತ ಮತ್ತು ಅನುಪಮ ವಸಿಷ್ಠ ಅತಿಥಿಯಾಗಿ ಭಾಗವಹಿಸುವರು.

Share this article