ಕನ್ನಡಪ್ರಭ ವಾರ್ತೆ ಮಣಿಪಾಲ
ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದೆ, ಇದನ್ನು ಕಡಿಮೆ ಮಾಡಲು ಮಕ್ಕಳಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಬೇಕು ಎಂದು ಸಾಹಿತಿ ಶಾಂತರಾಜ್ ಐತಾಳ್ ಹೇಳಿದ್ದಾರೆ. ಅವರು ಶನಿವಾರ ಇಲ್ಲಿನ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶ್ರೀರಮಾನಂದ ಸ್ಮೃತಿ ಮಂಟಪದಲ್ಲಿ ಉಡುಪಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಮುಚ್ಚುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ಮನೆಗಳಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ. ಕರ್ನಾಟಕ ರಾಜ್ಯೋದಯವಾಗಿ 50 ಸಂವತ್ಸರಗಳೇ ಸಂದರೂ ಕನ್ನಡ ಭಾಷೆಗೆ ನಿರೀಕ್ಷಿತ ಸ್ಥಾನಮಾನ ಸಿಕ್ಕಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗುವ, ಶಿಕ್ಷಣದ ಎಲ್ಲ ಘಟ್ಟಗಳಲ್ಲೂ ಕನ್ನಡ ಮಾಧ್ಯಮವಾಗುವ ಆಶಯ ಅನುಷ್ಠಾನವಾಗಿಲ್ಲ ಎಂದು ಬೇಸರಿಸಿದರು. ಪರಿಸರವಾದಿ ದಿನೇಶ್ ಹೊಳ್ಳ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎನ್.ಟಿ. ಭಟ್ ಧ್ವಜ ಹಸ್ತಾಂತರಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪುಸ್ತಕ ಬಿಡುಗಡೆ ಮಾಡಿದರು. ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಣಿಪಾಲ ಯುನಿವರ್ಸಲ್ ಪ್ರೆಸ್ ಪ್ರಧಾನ ಸಂಪಾದಕ ನೀತಾ ಇನಾಂದಾರ್, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಸಂಸ್ಕೃತಿ ಪೋಷಕ ವಿಶ್ವನಾಥ ಶೆಣೈ ಅತಿಥಿಗಳಾಗಿದ್ದರು.ಕಸಾಪ ಜಿಲ್ಲಾಧ್ಯಕ್ಷ ಸುರೇಂದ್ರನಾಥ ಅಡಿಗ, ಕಸಾಪ ಪದಾಧಿಕಾರಿಗಳಾದ ರಂಜಿನಿ ವಸಂತ್, ರಾಜೇಶ್ ಭಟ್ ಪಣಿಯಾಡಿ, ಮೋಹನ ಉಡುಪ ಹಂದಾಡಿ ಉಪಸ್ಥಿತರಿದ್ದರು. ತಾಲೂಕು ಅಧ್ಯ ಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ಪೂರ್ಣಿಮಾ ಕೊಡವೂರು ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು ಬಾಕ್ಸ್ಎತ್ತಿನಹೊಳೆ ಯೋಜನೆಗೆ ರಾಜಕೀಯ ಪಕ್ಷಗಳ ಎಟಿಎಂ: ದಿನೇಶ್ ಹೊಳ್ಳ
ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆಯು ರಾಜಕೀಯ ಪಕ್ಷಗಳ ಎಟಿಎಂ ಆಗಿದ್ದು ಈಗಾಗಲೇ ಬಡಕಲಾದ ನದಿಗಳನ್ನು ಕೊಲ್ಲುವ ನಿಧಿ ತಿರುವು ಯೋಜನೆಗಳಾಗಿ ಪರಿಣಮಿಸಿದೆ ಎಂದು ಪರಿಸರವಾದಿ ದಿನೇಶ್ ಹೊಳ್ಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಕ್ರೀಟ್ ಕಾಡಿನ ಬದಲು ನಿಜವಾದ ಕಾಡಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಗಿಡ ಸಂರಕ್ಷಣೆಯ ಕೆಲಸ ಪ್ರತಿ ಮನೆ, ಶಾಲೆಗಳಿಂದಾಗಬೇಕು. ಲಕ್ಷ ಗಿಡ ನೆಡೋದಕ್ಕಿಂತ ನೆಟ್ಟ ಗಿಡದ ರಕ್ಷಣೆಯ ಲಕ್ಷ್ಯ ಬೇಕು ಎಂದರು. ಫೋಟೋ ಃ ಸಮ್ಮೇಳನ