ಹುದ್ದೆ ಬೇಕು ಜವಾಬ್ದಾರಿ ಬೇಡ ಎನ್ನುವ ಮನೋಭಾವದವರು ಹೆಚ್ಚಾಗುತ್ತಿದ್ದಾರೆ. ನಮ್ಮ ಮೂಲ ಗುಣಲಕ್ಷಣಗಳ ಬಗ್ಗೆ ಅರಿವನ್ನು ಹೊಂದಿರಬೇಕು.
ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ ಹೊನ್ನಾವರ
ಹುದ್ದೆ ಬೇಕು ಜವಾಬ್ದಾರಿ ಬೇಡ ಎನ್ನುವ ಮನೋಭಾವದವರು ಹೆಚ್ಚಾಗುತ್ತಿದ್ದಾರೆ. ನಮ್ಮ ಮೂಲ ಗುಣಲಕ್ಷಣಗಳ ಬಗ್ಗೆ ಅರಿವನ್ನು ಹೊಂದಿರಬೇಕು. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು. ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಾರ್ಟರ್ಡ್ ಎಂಜಿನಿಯರ್ ಡಾ. ಅನಂತಮೂರ್ತಿ ಎಸ್. ಶಾಸ್ತ್ರಿ ಹೇಳಿದರು.
ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕ್ವಾಲಿಫಿಕೇಶನ್ ಅನ್ನುವುದು ನೌಕರಿ ಪಡೆಯಲು ಮಾರ್ಗ. ನೌಕರಿಯನ್ನು ನಾವು ಪಡೆಯಬಹುದು ಆದರೆ ಅದರ ನಂತರ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದನ್ನು ನಿಭಾಯಿಸಲು ಶಿಕ್ಷಣ ಮತ್ತು ಪದವಿಯ ಅಗತ್ಯತೆ ಇರುತ್ತದೆ. ಕೇವಲ ಪುಸ್ತಕದ ಹುಳ ಆಗಬೇಡಿ. ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ವಿದ್ಯಾರ್ಥಿಗಳು ಸರ್ವತೋಮುಖ ವ್ಯಕ್ತತ್ವ ವಿಕಸನ ಹೊಂದಬೇಕು. ನಾಯಕತ್ವದ ಗುಣ ಬೆಳೆಸಿಕೊಳ್ಳಿ. ಎಲ್ಲರನ್ನು ಗೌರವದಿಂದ ಕಾಣುವ ಮೂಲಕ ಉತ್ತಮ ಶಿಸ್ತನ್ನು ರೂಢಿಸಿಕೊಳ್ಳಿ. ಬದುಕು ಒಂದು ಕಲೆ ಎನ್ನುವುದನ್ನು ಅರ್ಥೈಸಿಕೊಳ್ಳಿ. ಜನರೊಂದಿಗೆ ಉತ್ತಮ ಬಾಂಧವ್ಯ, ಒಡನಾಟ ಬೆಳೆಸಿಕೊಳ್ಳಿ. ವ್ಯವಹಾರದ ಬಗ್ಗೆಯೂ ನೈಪುಣ್ಯ ಕಲಿತುಕೊಳ್ಳಿ. ಮೊಬೈಲ್ ಗುಂಗಿನಿಂದ ಹೊರಬನ್ನಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಪಪೂ ಕಾಲೇಜಿನ ಪ್ರಾಚಾರ್ಯ ಡಾ.ರಾಜು ಮಾಳಗಿಮನಿ ಮಾತನಾಡಿದರು.
ಕ್ರೀಡಾ ವಿಭಾಗದ ಸಲಹೆಗಾರ್ತಿ ರೇಣುಕಾ ಮೇಸ್ತ ಉಪಸ್ಥಿತರಿದ್ದರು. ಪ್ರತೀಕ್ಷಾ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾಯದರ್ಶಿ ಅಮೃತ್ ಶೇಟ್ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರ ಶ್ರೀರಾಮ ಭಟ್ ಪರಿಚಯಿಸಿದರು. ಉಪನ್ಯಾಸಕಿ ಹೇಮಾ ಭಟ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಕ್ರಿಶ್ ಪಿ. ರೋಡ್ರಗೀಸ್ ವಂದಿಸಿದರು. ಮಾನಸಾ ಗೌಡ ಹಾಗೂ ನೇಹಾ ಶೆಟ್ಟಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.