ಕನ್ನಡಪ್ರಭ ವಾರ್ತೆ ಉಡುಪಿದಕ್ಷಿಣ ಭಾರತದ ಲಕ್ಷಾಂತರ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನವದೆಹಲಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಅರಗ ಜ್ಞಾನೇಂದ್ರ ಮತ್ತಿತರರು ಮಹತ್ವದ ಸಭೆ ನಡೆಸಿದರು.ಮಹಾರಾಷ್ಟ್ರದಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರುವ ಅಡಕೆ ಸಾಗಣೆ ವಾಹನಗಳನ್ನು ತಡೆಹಿಡಿಯುತ್ತಿರುವುದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಅಡಕೆ ಬೆಳೆಗಾರರು, ಸಹಕಾರಿ ಸಂಸ್ಥೆಗಳು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಡೆಹಿಡಿಯಲಾಗಿರುವ ಅಡಕೆ ಸಾಗಣೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಹೊಂದಿರುವ ಅಡಕೆ ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಪಾರದರ್ಶಕ ಮತ್ತು ಶಾಶ್ವತ ಕಾರ್ಯವಿಧಾನ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.ಮ್ಯಾಮ್‌ಕೋಸ್, ಕ್ಯಾಂಪ್ಕೋ, ಟುಮ್ಕೊಸ್ ಹಾಗೂ ಕರ್ನಾಟಕ ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಮ್ಯಾಮ್‌ಕೋಸ್, ಕ್ಯಾಂಪ್ಕೋ, ಸೇರಿದಂತೆ ವಿವಿಧ ಅಡಿಕೆ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.