ಹುಲಿಗೆಮ್ಮ ದೇವಸ್ಥಾನದಲ್ಲಿ ಭಿಕ್ಷುಕರು ಹೆಚ್ಚಳ, ಸ್ವಯಂಪ್ರೇರಿತ ದೂರು

KannadaprabhaNewsNetwork |  
Published : Aug 22, 2025, 01:00 AM IST
21ಕೆಪಿಎಲ್24  ಶ್ರೀ ಹುಲಿಗೆಮ್ಮಾ ದೇವಸ್ಥಾನದ ವ್ಯಾಪ್ತಿಯಲ್ಲಿ ಭೀಕ್ಷಾಟನೆ ಮಾಡುವ ಕುರಿತು ಕನ್ನಡಪ್ರಭ ಮಾಡಿದ ವಿಶೇಷ ವರದಿಯನ್ನು ಆಧರಿಸಿ ಸ್ವಯಂ ದೂರು ದಾಖಲಿಸಿಕೊಂಡಿರುವುದು. | Kannada Prabha

ಸಾರಾಂಶ

 ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ  ಭಿಕ್ಷಾಟನೆ ಕುರಿತು ಕನ್ನಡಪ್ರಭ "ಹುಲಿಗೆಮ್ಮ ದೇವಸ್ಥಾನದಲ್ಲಿ ಹೆಜ್ಜೆಗೊಬ್ಬರು ಭಿಕ್ಷುಕರು " ಎಂಬ ವರದಿ ಪ್ರಕಟಿಸಿದ್ದರಿಂದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಳ್ಳಾರಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರ ವಿರುದ್ಧ ಸ್ವಯಂಪ್ರೇರಿತ ದೂರು

ಕೊಪ್ಪಳ:  ಹುಲಗಿಯ ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆ ಕುರಿತು ಕನ್ನಡಪ್ರಭ "ಹುಲಿಗೆಮ್ಮ ದೇವಸ್ಥಾನದಲ್ಲಿ ಹೆಜ್ಜೆಗೊಬ್ಬರು ಭಿಕ್ಷುಕರು " ಎಂಬ ವರದಿ ಪ್ರಕಟಿಸಿದ್ದರಿಂದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಳ್ಳಾರಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ವಾರದೊಳಗಾಗಿ ವಿವರಣೆ ನೀಡುವಂತೆ ತಿಳಿಸಿದೆ.

ರಾಜ್ಯದಲ್ಲಿ ಭಿಕ್ಷಾಟನೆ ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ತಡೆಯುವುದಕ್ಕಾಗಿಯೂ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ತಕ್ಷಣ ಕ್ರಮಕೈಗೊಳ್ಳಬೇಕು. ಆದರೆ, ಕನ್ನಡಪ್ರಭ ವರದಿ ನೋಡಿದರೆ ಹುಲಿಗೆಮ್ಮ ದೇವಸ್ಥಾನದಲ್ಲಿ ಭಿಕ್ಷಾಟನೆಗೆ ಮಕ್ಕಳ ಬಳಕೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಮತ್ತಿನೌಷಧಿ ನೀಡಿ ಅವರ ಹಕ್ಕುಗಳನ್ನೇ ಮೊಟಕು ಮಾಡಲಾಗಿದೆ. ಮಕ್ಕಳ ಶೋಷಣೆ ನಡೆಯುತ್ತಿದೆ. ಇದು ಕಾನೂನು ಬಾಹಿರವಾಗಿದೆಯಲ್ಲದೆ ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ, ತಕ್ಷಣ ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸ್ವಯಂ ದೂರು ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಆಯೋಗ ಕಟ್ಟನಿಟ್ಟಿನ ಸೂಚನೆ ನೀಡಿದೆ.

ಕನ್ನಡಪ್ರಭ ವರದಿ ಜತೆಗೆ ಸಾಕಷ್ಟು ದೂರುಗಳು ಸಹ ಬಂದಿವೆ. ಇಲ್ಲಿ ಭಿಕ್ಷಾಟನೆ ನಡೆಯುತ್ತಿರುವ ಕುರಿತು ಮಾಹಿತಿ ಇದ್ದರೂ ಕ್ರಮವಹಿಸದೆ ಇರುವ ಕುರಿತು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. 

ನಿರಾಶ್ರಿತರ ಪರಿಹಾರ ಕೇಂದ್ರ ನನೆಗುದಿಗೆ:

ಕೊಪ್ಪಳ ಜಿಲ್ಲೆಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಮಂಜೂರಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೂ ಸಹ ಈ ವರೆಗೂ ಆರಂಭಿಸಿಲ್ಲ. ಯಲಬುರ್ಗಾ ತಾಲೂಕಿನಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಕಟ್ಟಡ ನಿರ್ಮಾಣಕ್ಕಾಗಿ ಸಿದ್ಧತೆ ನಡೆದಿದೆ. ಆದರೆ, ಕಟ್ಟಡ ನಿರ್ಮಿಸುವ ಮೊದಲು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಲು ಅವಕಾಶವಿದ್ದರೂ ಸಮಾಜ ಕಲ್ಯಾಣ ಇಲಾಖೆ ಇಲ್ಲದ ಸಬೂಬು ಹೇಳುತ್ತಲೇ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ನಾಲ್ಕಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೇವಲ ಹುಲಿಗೆಮ್ಮ ದೇವಸ್ಥಾನ ಮಾತ್ರವಲ್ಲದೆ ಕೊಪ್ಪಳ, ಗಂಗಾವತಿ ಸೇರಿದಂತೆ ಹಲವೆಡೆ ಭಿಕ್ಷಾಟನೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸಹ ಸಮಾಜ ಕಲ್ಯಾಣ ಇಲಾಖೆ ಗಾಢ ನಿದ್ರೆಯಲ್ಲಿರುವಂತೆ ಕಾಣುತ್ತದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಬಾರಿಯೂ ಭಿಕ್ಷುಕರೇ ಇಲ್ಲ ಎಂದು ವರದಿ ನೀಡಲಾಗುತ್ತದೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮವಹಿಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.

ಹುಲಿಗೆಮ್ಮ ದೇವಸ್ಥಾನದಲ್ಲಿ ನಡೆಯುತ್ತಿರುವ ಭಿಕ್ಷಾಟನೆ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿಯನ್ನು ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ನಾಗಣ್ಣಗೌಡ ಗಂಭೀರವಾಗಿ ಪರಿಗಣಿಸಿ, ಸ್ವಯಂ ದೂರು ದಾಖಲಿಸಿದ್ದಾರೆ ಎಂದು ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ